ರಾಮನಗರ : ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು ಜಿಲ್ಲೆಯ ಹೊರಗಿನವರು ಲಸಿಕೆ ಪಡೆಯುತ್ತಿರುವುದನ್ನು ತಪ್ಪಿಸುವ ಸಲುವಾಗಿ ಮೇ 12ರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆನ್‌ಲೈನ್ ನೋಂದಣಿ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.
18-45 ವರ್ಷದೊಳಗಿನವರಿಗೆ ರಾಷ್ಟ್ರಮಟ್ಟದ ಲಸಿಕೆ ಅಭಿಯಾನ ಅರಂಭವಾಗಿದ್ದು, ಆನ್‌ಲೈನ್ ಮೂಲಕವೇ ನೋಂದಣಿ ಮಾಡಬೇಕಿದೆ. ಇದರಿಂದ ಜಿಲ್ಲೆಯ ಹೊರತಾದ ವ್ಯಕ್ತಿಗಳು ಇಲ್ಲಿನ ಆಸ್ಪತ್ರೆಗಳಿಗೆ ಬರುತ್ತಿರುವುದರಿಂದ ಸ್ಥಳೀಯರಿಗೆ ಲಸಿಕೆ ದೊರೆಯುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ. ಹಾಗಾಗಿ ಗ್ರಾಪಂ ಮಟ್ಟದಲ್ಲಿಯೇ ನೋಂದಣಿ ಕಾರ್ಯಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಲಸಿಕೆ ದೊರೆಯುತ್ತಿಲ್ಲ : ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಲಸಿಕೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಕೆಲವರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಬರುತ್ತಿದ್ದಾರೆ. ಹಾಗಾಗಿ ಪ್ರತಿದಿನ ಗುರಿ ನಿಗದಿಪಡಿಸಿಕೊಂಡಿರುವ ಆರೋಗ್ಯ ಇಲಾಖೆ ಹೊರಗಿನವರಿಗೆ ಅನಿವಾರ್ಯವಾಗಿ ಲಸಿಕೆ ಕೊಡಬೇಕಾಗಿದ್ದು, ಇದರಿಂದ ಸ್ಥಳೀಯರಿಗೆ ಲಸಿಕೆ ಇಲ್ಲದಂತಾಗುತ್ತಿದೆ. ದೇಶದ ಮಟ್ಟದಲ್ಲಿಯೇ ಆನ್‌ಲೈನ್ ನೋಂದಣಿ ಮಾಡಿಕೊಳ್ಳುವ ಅವಕಾಶ ಇರುವ ಕಾರಣಕ್ಕೆ ಸ್ಥಳೀಯರಿಗೆ ದೊರೆಯುತ್ತಿಲ್ಲ ಎನ್ನುವ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯ ಜನತೆಗೆ ಸರ್ಕಾರದ ನಿಯಮದಿಂದಾಗಿ ತೊಂದರೆ ಆಗುತ್ತಿದ್ದು, ಇದನ್ನು ಸರಿಪಡಿಸುವ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹವೂ ವ್ಯಕ್ತವಾಗಿದೆ.
ಡಿಕೆಶಿ ಸೂಚನೆ : ಕನಕಪುರದಲ್ಲಿ ಮಂಗಳವಾರ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕನಕಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಲಸಿಕೆಗಾಗಿ ಆನ್‌ಲೈನ್ ನೋಂದಣಿಯನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದಕ್ಕಾಗಿ ಗ್ರಾಪಂ ಮಟ್ಟದಲ್ಲಿಯೇ ಅಧಿಕಾರಿಗಳು ನೋಂದಣಿ ಆರಂಭಿಸಬೇಕು, ಇಲ್ಲವಾದರೆ ಸ್ಥಳೀಯರಿಗೆ ಲಸಿಕೆ ದೊರೆಯದಂತೆ ಆಗುತ್ತದೆ. ಈ ನಿಟ್ಟಿನಲ್ಲಿ ಗ್ರಾಪಂ ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳು ಕಾಯೋನ್ಮುಖರಾಗಬೇಕು ಎಂದು ಸಲಹೆ ನೀಡಿದ್ದರು. ಇದೇ ಯೋಜನೆಯನ್ನು ಜಿಲ್ಲೆಗೆ ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರದಿಂದಲೇ ಈ ಕಾರ್ಯ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಪೊಲೀಸರಿಗೂ ಕಿರಿಕಿರಿ : ಗಡಿ ಭಾಗದ ಚೆಕ್ ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ಲಸಿಕೆ ಪಡೆಯಲು ಬರುವವರೇ ದೊಡ್ಡ ತಲೆ ನೋವಾಗಿದ್ದಾರೆ. ನೀವು ರಾಮನಗರಕ್ಕೆ ಏಕೆ ಹೋಗುತ್ತಿದ್ದೀರಿ ಎಂದರೆ ನೋಂದಣಿ ಮಾಡಿಕೊಂಡಿದ್ದೇವೆ ಲಸಿಕೆ ಹಾಕಿಸಿಕೊಳ್ಳಬೇಕು ಎನ್ನುವ ಉತ್ತರ ನೀಡುತ್ತಿದ್ದಾರೆ. ಇವರನ್ನು ವಾಪಸ್ ಕಳುಹಿಸಲೂ ಆಗದೆ, ಒಳಗೆ ಬಿಡಲೂ ಆಗದಂತೆ ಆಗಿದೆ. ಸರ್ಕಾರಕ್ಕೆ ಮನವಿ : ಈ ನಡುವೆ ಆನ್‌ಲೈನ್ ನೋಂದಣಿ ಮೂಲಕ ಹೊರ ಜಿಲ್ಲೆಯವರೂ ಲಸಿಕೆ ಪಡೆಯುತ್ತಿರುವುದರಿಂದ ಸ್ಥಳೀಯರಿಗೆ ಲಸಿಕೆ ದೊರೆಯದ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಜತೆಗೆ ಆಯಾ ಜಿಲ್ಲೆಯವರಿಗಷ್ಟೇ ಲಸಿಕೆ ಪಡೆಯಲು ಅವಕಾಶ ಮಾಡಿಕೊಡಬೇಕು ಎನ್ನುವ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಈ ಸಂಬಂಧ ಶೀಘ್ರವೇ ಸೂಕ್ತ ನಿರ್ದೇಶನ ನೀಡುವ ಭರವಸೆ ಸರ್ಕಾರದಿಂದ ಸಿಕ್ಕಿದೆ.
ಹೊರಗಿನವರು ಜಿಲ್ಲೆಗೆ ಬಂದು ಲಸಿಕೆ ಪಡೆಯುವುದರಿಂದ ಸ್ಥಳೀಯರಿಗೆ ಲಸಿಕೆ ದೊರೆಯುತ್ತಿಲ್ಲ. ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಅಲ್ಲದೆ, ಲಸಿಕೆಗಾಗಿ ಮಂಗಳವಾರದಿಂದಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆನ್‌ಲೈನ್ ನೋಂದಣಿ ಹಮ್ಮಿಕೊಳ್ಳಲಾಗಿದೆ. ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ ಹೊರ ಜಿಲ್ಲೆಯಿಂದ ರಾಮನಗರಕ್ಕೆ ಬಂದು ಲಸಿಕೆ ಪಡೆಯುತ್ತಿರುವುದರಿಂದ ಜಿಲ್ಲೆಯ ಜನತೆ ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಕೂಡಲೇ ಇದಕ್ಕೆ ಪರಿಹಾರ ಕೊಡಿಸಬೇಕು. ಜಿಲ್ಲೆಯ ಜನತೆಯೇ ಲಸಿಕೆ ಪಡೆಯುವಂತೆ ಮಾಡಬೇಕು. ಎಚ್.ಎ.ಇಕ್ಬಾಲ್ ಹುಸೇನ್ ಕಾಂಗ್ರೆಸ್ ಮುಖಂಡ