ಗ್ರಾಮೀಣರಿಗೆ ಉದ್ಯೋಗ ಉದ್ದೇಶ - ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ನಿರ್ದೇಶಕ ನಿರಂಜನ್ ಪೋಳ್ಯ ಹೇಳಿಕೆ

Published on

ಪುತ್ತೂರು: ಜೀವವೈವಿಧ್ಯ ಉತ್ತೇಜಿಸುವ ಜತೆಗೆ ಗ್ರಾಮೀಣ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶವನ್ನಿಟ್ಟಿಕೊಂಡು ಕೋವಿಡ್ ಸಮಯದಲ್ಲಿ ಗ್ರಾಮಜನ್ಯ ಸಂಸ್ಥೆಯನ್ನು ಪ್ರಾರಂಭಿಸಿದ್ದು, ೪೫೦೦ ಕೃಷಿಕರಿಗೆ ವಿವಿಧ ರೀತಿಯ ಸೇವೆಯನ್ನು ನೀಡಲಾಗುತ್ತಿದೆ. ಜೇನಿನ ಕೃಷಿಯ ಜತೆಗೆ ವ್ಯವಹಾರವನ್ನು ಪ್ರಾರಂಭಿಸಿದ್ದು, ಹಲಸಿನ ಮೌಲ್ಯವರ್ಧನೆ ಮಾಡಲಾಗುತ್ತಿದೆ. ಒಂದು ಸಾವಿರ ಜೇನು ಪೆಟ್ಟಿಗೆಯನ್ನು ಸಂಸ್ಥೆ ಹೊಂದಿದ್ದು, ೧೦೦ ಮಂದಿ ಅನುಭವಿಗಳ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಪುತ್ತೂರಿನ ಪಂಜಳದ ಬಳಿ ಕಾರ್ಖಾನೆ ಸಿದ್ಧಪಡಿಸಲಾಗುತ್ತಿದ್ದು, ಸದ್ಯದಲ್ಲೇ ಲೋಕಾರ್ಪಣೆ ನಡೆಯಲಿದೆ ಎಂದು ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ನಿರ್ದೇಶಕ ನಿರಂಜನ್ ಪೋಳ್ಯ ಹೇಳಿದರು.

ಭಾರತದಲ್ಲಿ ಜೇನು ಕೃಷಿ ಹೆಚ್ಚಾಗಬೇಕೆಂಬ ನಿಟ್ಟಿನಲ್ಲಿ ಪ್ರಾರಂಭವಾದ ನ್ಯಾಷನಲ್ ಬೀ ಬೋರ್ಡ್ ಸಹಕಾರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸಂಸ್ಕರಣ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಮೂಲಕ ರಫ್ತು ಗುಣಮಟ್ಟದ ಜೇನನ್ನು ಸಿದ್ಧಪಡಿಸಿ ಕಳುಹಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ದಕ್ಷಿಣ ಭಾರತದಲ್ಲೇ ದೊಡ್ಡ ಪ್ಲಾಂಟ್ ಇದಾಗಿದ್ದು, ೨.೫ ಟನ್ ಜೇನು ಸಂಸ್ಕರಣೆ ಮಾಡುವ ಎರಡು ಯಂತ್ರ ಇದೆ. ಪ್ಯಾಕಿಂಗ್, ದಾಸ್ತಾನು ಮಾಡುವ ವ್ಯವಸ್ಥೆ ಸೇರಿ ಸಂಪೂರ್ಣ ವ್ಯವಸ್ಥೆ ಇದೆ. ದಿನದಲ್ಲಿ ಸುಮಾರು ೧೫ ಟನ್ ಸಂಸ್ಕರಣೆ ಮಾಡಲು ಸಾಧ್ಯವಿದ್ದು, ಭವಿಷ್ಯದ ಚಿಂತನೆಯನ್ನು ಇಟ್ಟುಕೊಂಡು ವ್ಯವಸ್ಥೆ ಮಾಡಲಾಗಿದೆ. ದ. ಕ. ಜೇನು ಕೃಷಿಕರ ಸಭೆಯನ್ನು ನಡೆಸಿದ್ದು, ಉದ್ದೇಶ, ಸೇವೆಗಳ ಬಗ್ಗೆ ತಿಳಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಮಾರು ೪೦ ಟನ್ ಹಲಸು ಖರೀದಿಸಿ, ೩೫ ಮಹಿಳಾ ಉದ್ಯೋಗಿಗಳ ಮೂಲಕ ಮಂಗಳೂರಿನ ಆಹಾರ ಸಂಸ್ಥೆಗೆ ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನ ಇನ್ನಷ್ಟು ಹೆಚ್ಚಿನ ಮಹತ್ವ ನೀಡುವ ಕಾರ್ಯ ನಡೆಯಲಿದೆ. ಮಣ್ಣು ಮತ್ತು ನೀರಿನ ಸುಸ್ಥಿರ ವಿಚಾರಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಭಾರತೀಯ ಕಿಸಾನ್ ಸಂಘದ ಜತೆಗೆ ಒಪ್ಪಂದ ಮಾಡಿಕೊಂಡು ಬಿದಿರು ಕೃಷಿಗೆ ಒತ್ತು ನೀಡಲಾಗುತ್ತಿದೆ. ೧೦ ಸಾವಿರ ಬಿದಿರು ಗಿಡವನ್ನು ಈಗಾಗಲೇ ವಿತರಣೆ ಮಾಡಿದ್ದು, ೩೦ ಎಕರೆ ಜಾಗದಲ್ಲಿ ಬಿದಿರು ಕೃಷಿ ಮಾಡಲಾಗಿದೆ. ಈ ಮೂಲಕ ಮಣ್ಣಿನ ಸವಕಳಿಯನ್ನು ಕಡಿಮೆ ಮಾಡಿ ನೀರಿನ ಅಭಾವನ್ನು ನೀಗಿಸಬಹುದಾಗಿದೆ. ಕೃಷಿಕರಿಗೆ ನಾಟಿಗೆ ಸಹಾಯವಾಗುವ ನಿಟ್ಟಿನಲ್ಲಿ ವಿವಿಧ ಕಂಪನಿಗಳ ಸಿಎಸ್‌ಆರ್ ಫಂಡ್ ಬಳಸುವ ನಿಟ್ಟಿನಲ್ಲಿಯೂ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಮೂಲಚಂದ್ರ ಕೆ., ನಿರ್ದೇಶಕರಾದ ರಾಮ ಪ್ರತೀಕ್ ಕರಿಯಾಲ, ನಿರಂಜನ್ ಪೋಳ್ಯ, ಶ್ರೀನಂದನ್ ಕೆ., ಕಾರ್ಯನಿರ್ವಹಣಾಽಕಾರಿ ರಾಜೇಶ್ ಸುವರ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net