ವರ್ಷಾಂತ್ಯಕ್ಕೆ ಗ್ರಾಪಂ ಚುನಾವಣೆ?: ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿ ಪಾಲನೆ

election3
Published on

ಬೆಂಗಳೂರು: ಕರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ವರ್ಷಾಂತ್ಯಕ್ಕೆ ನಡೆಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ. ಕರೊನಾ ಹಾವಳಿ ಕಾಲದಲ್ಲಿ ನಡೆಯುವ ಚುನಾವಣೆಗಳಿಗಾಗಿ ಕೇಂದ್ರ ಚುನಾವಣಾ ಆಯೋಗ ಹೊಸ ನೀತಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ 6-7 ತಿಂಗಳಿಂದ ಚುನಾವಣೆ ನಡೆಯದೆ ಆಡಳಿತಾಧಿಕಾರಿಗಳ ಕೈಗೊಂಬೆಯಾಗಿರುವ ಗ್ರಾಪಂಗಳು ಕೆಲವೇ ತಿಂಗಳಲ್ಲಿ ಜನಪ್ರತಿನಿಧಿಗಳ ಕೈ ಸೇರಲಿವೆ. ಕರೊನಾ ತುಸು ಹತೋಟಿಗೆ ಬಂದರೂ ಸಾಕು ಡಿಸೆಂಬರ್​ನಲ್ಲಿ ಆಯೋಗ ಚುನಾವಣೆ ನಡೆಸುವುದು ಬಹುತೇಕ ಖಚಿತವಾಗಿದೆ.

ಮಾರ್ಗಸೂಚಿ ಏನು? * ಮನೆ ಮನೆ ಪ್ರಚಾರ ಸಂದರ್ಭ ಐವರಿಗೆ ಮಾತ್ರ ಅವಕಾಶ * ಸಾರ್ವಜನಿಕ ಸಭೆಗೆ ಕೇಂದ್ರ ಗೃಹ ಸಚಿವಾಲಯ ನಿಯಮಾವಳಿಗಳ ಪಾಲನೆ * ಮತದಾನ ಕೇಂದ್ರದಲ್ಲಿ ಸಾಮಾಜಿಕ ಅಂತರ * ಕೈಗವಸುಗಳನ್ನು ಧರಿಸಿ ಮತ ಚಲಾವಣೆ * ಮತದಾರ ಮಾಸ್ಕ್ ಧರಿಸುವುದ ಕಡ್ಡಾಯ

ವ್ಯವಸ್ಥಿತ ಸಿದ್ಧತೆ ಮತದಾರರ ಪಟ್ಟಿ, ಮತಗಟ್ಟೆ, ಮತಗಟ್ಟೆ ಸಿಬ್ಬಂದಿಗೆ ಚುನಾವಣಾ ತರಬೇತಿ, ಮೀಸಲಾತಿ ಪಟ್ಟಿ ಸೇರಿ ಸಕಲ ಸಿದ್ಧತೆಗಳನ್ನೂ ಚುನಾವಣಾ ಆಯೋಗ ಬಹು ಹಿಂದೆಯೇ ಮಾಡಿಕೊಂಡಿದೆ. ಪಕ್ಷಗಳನ್ನು ಬೇರು ಮಟ್ಟದಲ್ಲಿ ಬಲವರ್ಧನೆಗೊಳಿಸುವ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಲಿವೆ.

ಅಸಾಧಾರಣ ಸಂದರ್ಭ ಕಾರಣ ರಾಜ್ಯದಲ್ಲಿ 6025 ಗ್ರಾಪಂಗಳಿದ್ದು, ಅವುಗಳ ಅವಧಿ ಜೂನ್-ಜುಲೈಗೆ ಅಂತ್ಯವಾಗಿದೆ. ಕರೊನಾ ಕಾರಣ ಅಸಾಧಾರಣ ಸಂದರ್ಭ ಎಂದು ಭಾವಿಸಿ ರಾಜ್ಯ ಚುನಾವಣಾ ಆಯೋಗ ಪಂಚಾಯತಿಗಳ ಚುನಾವಣೆಯನ್ನು ಮೇಗೆ ಮುಂದೂಡಿತ್ತು. ಈ ಮಧ್ಯೆ ಚುನಾವಣೆ ಮುಂದೂಡಿಕೆ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಗ್ರಾಪಂ ಚುನಾವಣೆಗಾಗಿ 21 ಜಿಲ್ಲೆಗಳಲ್ಲಿ ಮೀಸಲಾತಿ ಪಟ್ಟಿ ಸಿದ್ಧವಾಗಿರುವುದಾಗಿ ರಾಜ್ಯ ಚುನಾವಣಾ ಆಯೋಗ ಇತ್ತೀಚಿಗೆ ಹೈಕೋರ್ಟ್​ಗೆ ಮಾಹಿತಿ ನೀಡಿತ್ತು. ಉಳಿದಿರುವ 9 ಜಿಲ್ಲೆಗಳ ಮೀಸಲಾತಿ ಪಟ್ಟಿಗಾಗಿ ಸಮಯವನ್ನು ಕೋರಿತ್ತು. ಈ ನಡುವೆ ಕೇಂದ್ರ ಚುನಾವಣಾ ಆಯೋಗ ಕರೊನಾ ಕಾಲದಲ್ಲಿ ಚುನಾವಣೆ ನಡೆಸಲು ನಿಯಮ ರೂಪಿಸಿರುವುದರಿಂದ ಅದರನ್ವಯ ಗ್ರಾಪಂ ಚುನಾವಣೆ ನಡೆಸುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net