ಮತದಾರರ ಪಟ್ಟಿಯಲ್ಲಿ ಆಕಾಂಕ್ಷಿಯ ಹೆಸರೇ ಇಲ್ಲ! ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಕನಸು ಭಗ್ನ

GP Election
Published on

ಸಕಲೇಶಪುರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಸಿದ್ಧತೆ ಮಾಡಿಕೊಂಡಿದ್ದ ಆಕಾಂಕ್ಷಿಯೊಬ್ಬರ ಕನಸು ನಾಮಪತ್ರ ಸಲ್ಲಿಕೆಗೂ ಮುನ್ನವೇ ಭಗ್ನಗೊಂಡಿದೆ.

ಹೊಸೂರು ಗ್ರಾಮದ ಪೂವಪ್ಪ ನಿರಾಸೆ ಅನುಭವಿಸಿದ ಸ್ಪರ್ಧಾ ಆಕಾಂಕ್ಷಿ. ಹೊಸೂರು ಗ್ರಾಪಂನ ಹೊಸೂರು ಗ್ರಾಮ ಈ ಬಾರಿ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಮೀಸಲು ಪಟ್ಟಿ ಪ್ರಕಟವಾದ ಕ್ಷಣದಿಂದಲೇ ಪೂವಪ್ಪ ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದರು. ಸ್ಪರ್ಧೆಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಇವರ ಪೂರ್ವಸಿದ್ಧತೆ ಗಮನಿಸಿದ ಎದುರಾಳಿಗಳು, ಸ್ಪರ್ಧೆಗೆ ಹಿಂದೇಟು ಹಾಕಿದ್ದರಿಂದ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿತ್ತು.

ಅದರಂತೆ ಗುರುವಾರ ನಾಮಪತ್ರ ಸಲ್ಲಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದ ಪೂವಪ್ಪ, ನಾಮಪತ್ರಕ್ಕೆ ಕ್ರಮ ಸಂಖ್ಯೆ ಹಾಕಲು ಮತದಾರರ ಪಟ್ಟಿ ಪರಿಶೀಲಿಸಿದಾಗ ಅವರ ಹೆಸರೇ ಇರಲಿಲ್ಲ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದುಕೊಂಡಿದ್ದ ಅವರ ಆಸೆ ಕಮರಿ ಹೋಯಿತು.

"ಹುಟ್ಟಿನಿಂದಲೇ ಗ್ರಾಮದಲ್ಲೇ ಇರುವ ನಾನು, ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇನೆ. ಈ ಬಾರಿ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಕೈ ಬಿಟ್ಟು ಹೋಗಿದ್ದು, ವ್ಯವಸ್ಥೆಯಲ್ಲಿನ ಲೋಪವನ್ನು ಎತ್ತಿ ತೋರುತ್ತಿದೆ" ಎಂದು ಪೂವಪ್ಪ ಅಸಮಾಧಾನ ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net