ಗ್ರಾಮ ಪಂಚಾಯಿತಿ ಚುನಾವಣೆ ಕರ್ತವ್ಯಕ್ಕೆ ಅಡ್ಡಿ: ಶಿಕ್ಷಕರಿಬ್ಬರ ಅಮಾನತು

GP Election
Published on

ಕಲಬುರಗಿ: ಗ್ರಾಮ ಪಂಚಾಯಿತಿ ಚುನಾವಣೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಸರ್ಕಾರಿ ಪ್ರೌಢ ಶಾಲೆಯ ಇಬ್ಬರು ಮುಖ್ಯಶಿಕ್ಷಕರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿಯೂ ಆದ ಚುನಾವಣಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಆದೇಶ ಹೊರಡಿಸಿದ್ದಾರೆ. ಕಪನೂರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಆರ್. ಕಟ್ಟಿಮನಿ, ಕಲಮುಡದ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಬಂಡೆಪ್ಪ ಡಿ. ಬೇನೂರು ಅವರು ಅಮಾನತುಗೊಂಡವರು.

ಎಸ್.ಆರ್. ಕಟ್ಟಿಮನಿ ಅವರನ್ನು ಅವರಾದ್ ಗ್ರಾಪಂಗೆ, ಬಂಡೆಪ್ಪ ಡಿ.ಬೇನೂರು ಅವರನ್ನು ಸಾವಳಗಿ (ಬಿ) ಗ್ರಾಪಂ ಚುನಾವಣಾಧಿಕಾರಿಯಾಗಿ ನಿಯೋಜಿಸಲಾಗಿತ್ತು. ಡಿಸೆಂಬರ್​ 4ರಂದು ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಚುನಾವಣಾ ತರಬೇತಿಗೆ ಇವರಿಬ್ಬರೂ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ ಗೈರಾಗಿದ್ದರು. ತಹಸೀಲ್ದಾರ್​ ಅವರು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದ್ದರಾದರೂ ಇವರಿಬ್ಬರ ಮೊಬೈಲ್​ ಸ್ವಿಚ್ಡ್​ ಆಪ್​ ಆಗಿತ್ತು. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗೆ ತಿಳಿಸಲಾಗಿತ್ತಾದರೂ ಅವರಿಗೂ ಈ ಶಿಕ್ಷಕರಿಂದ ಪ್ರತಿಕ್ರಿಯೆ ಸಿಕ್ಕಿಲ್ಲ.

ಚುನಾವಣಾ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಬೇಜವಾಬ್ದಾರಿಯಿಂದ ವರ್ತಿಸಿದ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್​ ಪ್ರಸ್ತಾವನೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕಾಯ್ದಿರಿಸಿ ಶಿಕ್ಷಕರಿಬ್ಬರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net