

ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯ 2ನೇ ಹಂತದ ಮತದಾನ ಭಾನುವಾರ ನಡೆಯಲಿದೆ. ಒಟ್ಟಾರೆ 2,709 ಗ್ರಾ.ಪಂಗಳ 39,378 ಸ್ಥಾನಗಳಿಗೆ ಮತದಾನ ನಡೆಯಲಿದ್ದು ಒಟ್ಟು 1,05,431 ಅಭ್ಯರ್ಥಿಗಳ ಹಣೆಬರವನ್ನು ಈ ಚುನಾವಣೆ ನಿರ್ಣಯಿಸಲಿದೆ.
ಈ ನಡುವೆ, ಸುಗಮ ಮತದಾನ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಡಾ.ಬಿ.ಬಸವರಾಜು ಶನಿವಾರ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅಂತಿಮ ಸಿದ್ಧತೆಗಳ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಕೆಲವು ಅಗತ್ಯ ಸಲಹೆ-ಸೂಚನೆಗಳನ್ನೂ ನೀಡಿದ್ದಾರೆಂದು ತಿಳಿದು ಬಂದಿದೆ.
30ರಂದು ಮತ ಎಣಿಕೆ: ಗ್ರಾಮ ಪಂಚಾಯಿತಿಗಳ ಎರಡೂ ಹಂತದ ಚುನಾವಣೆಯ ಮತಗಳ ಎಣಿಕೆ ಕಾರ್ಯ ಡಿ.30ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ನಡೆಯಲಿದೆ.
ಮೂರೂ ಪಕ್ಷಗಳ ಬಲ ಪ್ರದರ್ಶನಕ್ಕೆ ವೇದಿಕೆ
ಚುನಾವಣೆ ಪಕ್ಷಾತೀತವಾಗಿದ್ದರೂ ಪ್ರಮುಖ ರಾಜಕೀಯ ಪಕ್ಷಗಳು ಮಹತ್ವ ನೀಡಿರುವು ದರಿಂದ ಪ್ರತಿಷ್ಠೆ, ಜಿದ್ದಾಜಿದ್ದಿ ಹಾಗೂ ಬಲ ಪ್ರದರ್ಶನಕ್ಕೆ ಪಂಚಾಯಿತಿ ಫೈಟ್ ವೇದಿಕೆಯಾಗಿ ಮಾರ್ಪಟ್ಟಿದೆ. ಮುಖಂಡರಷ್ಟೇ ಅಲ್ಲ, ಕಾರ್ಯಕರ್ತರ ಚುನಾವಣೆಗೂ ಸಮಾನ ಆದ್ಯತೆಯ ಸಂದೇಶ ರವಾನಿಸಿ ತಳಮಟ್ಟದಲ್ಲಿ ಪಕ್ಷದ ಬುನಾದಿ ಭದ್ರಪಡಿಸಲು ರಾಜಕೀಯ ಪಕ್ಷಗಳು ಪ್ರಾಮುಖ್ಯತೆ ನೀಡಿವೆ.
ಪ್ರಭಾವ ಮತ್ತು ಹಿಡಿತವುಳ್ಳ ಗ್ರಾ.ಪಂ. ಕೈಬಿಟ್ಟು ಹೋಗದಂತೆ ಬೆವರಿಳಿಸಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೊರತುಪಡಿಸಿ ವೈಯಕ್ತಿಕ ವರ್ಚಸ್ಸು, ನಿಕಟ ಸಂಪರ್ಕ ನೆಚ್ಚಿಕೊಂಡವರು ಹಾಗೂ ಸಾರ್ವಜನಿಕ ಬದುಕಿನ ಹಂಬಲವುಳ್ಳವರು ಚುನಾವಣಾ ಅಖಾಡದಲ್ಲಿರುವುದು ಗಮನಾರ್ಹ. ಮೊದಲ ಹಂತದ ಚುನಾವಣೆ ಅಖಾಡದಲ್ಲಿದ್ದಂತೆ 2ನೇ ಹಂತದಲ್ಲೂ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸಿದ್ದಾರೆ. ಹಣ, ಹೆಂಡದ ಹೊಳೆಯೇ ಹರಿದಿರುವ ಮಾಹಿತಿ ಬಹಿರಂಗವಾಗಿದೆ. ನಗರ ಪ್ರದೇಶಗಳಲ್ಲಿರುವ ಮತದಾರರನ್ನು ಶನಿವಾರವೇ ಹಳ್ಳಿಗೆ ಕರೆಸಿಕೊಳ್ಳಲು ಅಭ್ಯರ್ಥಿಗಳು ಬಸ್ ವ್ಯವಸ್ಥೆ ಮಾಡಿದ್ದರು.