

ರಾಜ್ಯದ ಗ್ರಾಪಂಗಳಿಗೆ ತೆರಿಗೆ ಸಂಕಷ್ಟ ಎದುರಾಗಿದೆ. ತೆರಿಗೆ ಜಾಲದಿಂದ ಜಾರುತ್ತಿರುವ ಆಸ್ತಿಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಇದರ ಜತೆಗೆ ತಂತ್ರಾಂಶ ದೋಷ ಅಭಿವೃದ್ಧಿಗೆ ಗ್ರಹಣ ಕವಿಸಿದೆ. ಈ ಸಮಸ್ಯೆ ಕುರಿತು ವಿಜಯವಾಣಿ ಬೆಳಕು ಚೆಲ್ಲಿದೆ.
| ವಿಲಾಸ ಮೇಲಗಿರಿ ಬೆಂಗಳೂರು
ಗ್ಯಾರಂಟಿ ಯೋಜನೆಗಳ ಭಾರ ರಾಜ್ಯ ಸರ್ಕಾರದ ಬೆನ್ನೇರಿರುವ ನಡುವೆಯೇ ಆಸ್ತಿ ತೆರಿಗೆ ಜಾಲದಿಂದ ಗ್ರಾಪಂಗಳು ಹೊರಗುಳಿಯುತ್ತಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಗ್ರಹಣ ಕವಿಸಿದೆ. ಪರಿಣಾಮ ನಳ ರಿಪೇರಿ, ಚರಂಡಿ ಸ್ವಚ್ಛತೆಯಂತಹ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಹಣದ ಅಭಾವ ಎದುರಾಗಿದೆ.
ಗ್ರಾಮ ಪಂಚಾಯಿತಿಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ತೆರಿಗೆ ವಸೂಲಾಗುತ್ತಿಲ್ಲ. ಒಟ್ಟಾರೆ 1,32,46,076 ಆಸ್ತಿ ಮಾತ್ರ ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ. ಈ ಪೈಕಿ 75 ಲಕ್ಷ ಆಸ್ತಿ ತೆರಿಗೆ ಜಾಲದಿಂದ ಜಾರಿಕೊಂಡಿವೆ.
ಗ್ರಾಪಂ ವ್ಯಾಪ್ತಿಯ ಆಸ್ತಿ ವಿವರಗಳನ್ನು ಮ್ಯಾನುವಲ್ ಸಮೀಕ್ಷೆ ಪೂರ್ವದಲ್ಲಿ ಹಾಗೂ ನಂತರದಲ್ಲಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವರು ಆ.2 ರಂದು ಸೂಚಿಸಿದ್ದರು. ಆದರೂ ಈ ಕಾರ್ಯವಾಗಿಲ್ಲ. ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮ 2021ಕ್ಕೆ ತಿದ್ದುಪಡಿ ಮಾಡಿ ಗ್ರಾಮೀಣಾಭಿವೃದ್ಧಿ ಸಚಿವರು ಅನುಮೋದನೆ ನೀಡಿ ಆರು ತಿಂಗಳು ಕಳೆದರೂ ಅಧಿಕಾರಿಗಳ ಅನಾದರದಿಂದ ನಿಯಮ ಜಾರಿಗೆ ಬಂದಿಲ್ಲ. ಹಾಗಾಗಿ ವೈಜ್ಞಾನಿಕ ಶುಲ್ಕ ನಿಗದಿ ಸಾಧ್ಯವಾಗಿಲ್ಲ.
ಕೈಗಾರಿಕೆ ವಸಾಹತು ಕಿರಿಕಿರಿ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ 240 ಕೈಗಾರಿಕಾ ವಸಾಹತುಗಳಿವೆ. ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ 162 ಕೈಗಾರಿಕಾ ವಲಯಗಳಿವೆ. ಒಟ್ಟು ಕೈಗಾರಿಕೆಗಳ ಪೈಕಿ ಶೇ.22 ಕೈಗಾರಿಕೆಗಳಿಂದ ಮಾತ್ರ ಗ್ರಾಮ ಪಂಚಾಯಿತಿಗಳಿಗೆ ತೆರಿಗೆ ಬರುತ್ತಿದೆ. ಅದೇ ರೀತಿ ಶಿಕ್ಷಣ ಸಂಸ್ಥೆಗಳು, ಸಿಮೆಂಟ್, ಸಕ್ಕರೆ ಕಾರ್ಖಾನೆಗಳು ಸಾಕಷ್ಟು ಲಾಭ ಮಾಡುತ್ತಿದ್ದರೂ ಪ್ರಭಾವಿಗಳ ಹಿಡಿತದಲ್ಲಿರುವುದರಿಂದ ಗ್ರಾಪಂಗಳಿಗೆ ತೆರಿಗೆ ಪಾವತಿಯಾಗುತ್ತಿಲ್ಲ. ಕೈಗಾರಿಕಾ ವಲಯಗಳಲ್ಲಿ ಸರ್ಕಾರ ರಸ್ತೆ, ಚರಂಡಿ, ವಿದ್ಯುದ್ದೀಪ, ನೀರು ಸೇರಿ ಎಲ್ಲ ಮೂಲಸೌಕರ್ಯ ಕಲ್ಪಿಸಿದ್ದರೂ ಹಸಿರು ವಲಯದಲ್ಲಿರುವ ಕಾರಣ ತೆರಿಗೆ ವಸೂಲಾಗುತ್ತಿಲ್ಲ.
| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಕರ ಸಂಗ್ರಹ ವಸೂಲಿ ರಾಜ್ಯದ ಗ್ರಾಪಂಗಳಿಗೆ ಸವಾಲಾಗಿದೆ. ವಸೂಲಿಗಾಗಿ ಮನೆ ಬಾಗಿಲಿಗೆ ಹೋದರೂ ಪಿಒಎಸ್ನಿಂದ ನೀಡಿದ ರಶೀದಿಯಲ್ಲಿನ ದೋಷದಿಂದಾಗಿ ಸಾರ್ವಜನಿಕರು ಕರ ಪಾವತಿಸಲು ಹಿಂದೇಟು ಹಾಕುವಂತಾಗಿದೆ. 2 ವರ್ಷಗಳ ಹಿಂದಿನಿಂದ ಕರ ವಸೂಲಿ ವಿವರವನ್ನು ‘ಪಂಚತಂತ್ರ 2.0’ ಮೂಲಕ ಆನ್ಲೈನ್ನಲ್ಲಿ ನಮೂದಿಸಲಾಗುತ್ತಿದೆ. ಗ್ರಾಪಂಗಳಿಗೆ ಖಾಸಗಿ ಬ್ಯಾಂಕೊಂದು ಪಿಒಎಸ್ ಯಂತ್ರ ಒದಗಿಸಿದೆ. ಕರ ವಸೂಲಿಗೆ ಪಿಒಎಸ್ ಹಿಡಿದು ಮನೆ, ಮನೆಗೆ ಬಿಲ್ ಕಲೆಕ್ಟರ್ಗಳು ಹೋದಾಗ ಆಸ್ತಿ ಮಾಲೀಕರು ಕಂದಾಯ ಪಾವತಿಸುತ್ತಿಲ್ಲ.
ಪಿಒಎಸ್ ಯಂತ್ರಗಳ ಅಸ್ಪಷ್ಟತೆ ಇದಕ್ಕೆ ಕಾರಣ. ಈ ರಸೀದಿಗಳಲ್ಲಿ ಅಕ್ಷರ ಬಹಳ ದಿನ ಉಳಿಯದೆ ಅಳಿಸಿಹೋಗುತ್ತವೆ. ಖಾತೆದಾರನ ಹೆಸರು, ಇ-ಸ್ವತ್ತು ಇತ್ಯಾದಿ ಮಾಹಿತಿ ನಮೂದಾಗುವುದಿಲ್ಲ. ಇದರ ಜತೆಗೆ ಗ್ರಾಪಂ ಸಿಬ್ಬಂದಿ ಕೊರತೆಯೂ ಕಂದಾಯ ವಸೂಲಿಯಲ್ಲಿ ನಿರುತ್ಸಾಹ ಮೂಡಿಸುತ್ತಿದೆ.
ಇ-ಸ್ವತ್ತು, ಸಾಲ ಇತ್ಯಾದಿ ಅಗತ್ಯ ದಾಖಲೆಗಳಿಗೆ ಗ್ರಾಪಂ ಕಚೇರಿಗಳಿಗೆ ಬರುವ ಖಾತೆದಾರರಿಂದ ಕಂದಾಯ ಪಾವತಿಸಿಕೊಳ್ಳಲಾಗುತ್ತಿದೆಯೇ ಹೊರತು, ಆದಾಯ ಹೆಚ್ಚಿಸಿಕೊಳ್ಳಬೇಕೆಂಬ ಗಂಭೀರ ಚಿಂತನೆ ಇಲ್ಲವಾಗಿದೆ. ಪಿಒಎಸ್ ಬದಲು ಟ್ಯಾಬ್, ಎ-4 ಸೈಜಿನಲ್ಲಿ ಖಾತೆದಾರನ ಸಂಪೂರ್ಣ ವಿವರವಿರುವ ಕಂದಾಯ ಪಾವತಿ ರಸೀದಿ ಕೊಡುವುದು, ಪ್ರತಿ ಗ್ರಾಪಂನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಪಂಚತಂತ್ರ 2.0 ಸಾಫ್ಟ್ ವೇರ್ ಸುಧಾರಣೆ, ಇ-ಸ್ವತ್ತು ವಿತರಣೆ ಹೆಚ್ಚಳ ಹಾಗೂ ಕಂದಾಯ ವಿಳಂಬ ಪಾವತಿಗೆ ಶೇ.5 ದಂಡದ ಕುರಿತಂತೆ ಜಾಗೃತಿ ಮೂಡಿಸಿದರೆ ಟ್ಯಾಕ್ಸ್ ವಸೂಲಿ ಸುಧಾರಿಸಲಿದೆ ಎಂಬ ಅಭಿಪ್ರಾಯ ನೌಕರ ವರ್ಗದಲ್ಲಿದೆ.
ತೆರಿಗೆಯಿಂದ ಹೊರಗೆ?: ಶೇ.28 ರಿಂದ 29 ಲಕ್ಷ ಉದ್ದಿಮೆಗಳು ಗ್ರಾಪಂ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿವೆ. ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ಸಕ್ಕರೆ ಕಾರ್ಖಾನೆಗಳು ವರ್ಷದಿಂದ ವರ್ಷಕ್ಕೆ ನಿರೀಕ್ಷೆಗೂ ಮೀರಿ ಲಾಭ ಗಳಿಸುತ್ತಿದ್ದರೂ ನಯಾಪೈಸೆ ತೆರಿಗೆ ಕಟ್ಟುತ್ತಿಲ್ಲ. ಬೆಂಗಳೂರು ದಕ್ಷಿಣ, ಉತ್ತರ ತಾಲೂಕು ವ್ಯಾಪ್ತಿಯಲ್ಲೇ 3 ಸಾವಿರಕ್ಕೂ ಅಧಿಕ ಕೈಗಾರಿಕೆಗಳು ತೆರಿಗೆ ಕಟ್ಟುತ್ತಿಲ್ಲ. ಈ ಕೈಗಾರಿಕಾ ವಲಯಗಳಲ್ಲಿ ಸರ್ಕಾರ ರಸ್ತೆ, ಚರಂಡಿ, ವಿದ್ಯುದ್ದೀಪ, ನೀರು ಸೇರಿ ಎಲ್ಲ ಮೂಲಸೌಕರ್ಯ ಕಲ್ಪಿಸಿದೆ. ಆದರೂ ತೆರಿಗೆ ಕೇಳುವಂತಿಲ್ಲ. ಈ ಕೈಗಾರಿಕೆಗಳು ಹಸಿರು ವಲಯದಲ್ಲಿರುವ ಕಾರಣ ತೆರಿಗೆ ವಸೂಲು ಮಾಡಲು ಸಾಧ್ಯವಾಗುತ್ತಿಲ್ಲ.
* ಗ್ರಾಪಂ ವ್ಯಾಪ್ತಿ ಆಸ್ತಿ ವೈಜ್ಞಾನಿಕ ಸರ್ವೆ ಆಗಬೇಕು
* ಮ್ಯಾನ್ಯುಯಲ್ ಸರ್ವೆ ಮಾಡಿ ದಾಖಲಿಸಬೇಕು
* ಆಸ್ತಿ ತೆರಿಗೆ ದಾಖಲೆ ಸಮರ್ಪಕ ನಿರ್ವಹಣೆ ಬೇಕು
* ಬಿಬಿಎಂಪಿ ಮಾದರಿ ಕಟ್ಟುನಿಟ್ಟಾಗಿ ವಸೂಲಾಗಬೇಕು
ಗ್ರಾಪಂ ವ್ಯಾಪ್ತಿಯಲ್ಲಿನ ತೆರಿಗೆ ಜಾಲದಿಂದ ಹೊರಗುಳಿದ ಎಲ್ಲ ಆಸ್ತಿಗಳನ್ನು ಸರ್ವೆ ಮಾಡಿ ತೆರಿಗೆ ಜಾಲ ವ್ಯಾಪ್ತಿಗೆ ತರಬೇಕು. ಆ ಮೂಲಕ ಸರ್ಕಾರದ ಮೇಲಿನ ಆರ್ಥಿಕ ಅವಲಂಬನೆ ಕಡಿಮೆ ಮಾಡಬೇಕು. | ಜಗದೀಶ ಆಸ್ತಿ ತೆರಿಗೆ ವಿಷಯ ತಜ್ಞ
ಪಂಚತಂತ್ರ 2.0 ಸಾಫ್ಟ್ವೇರ್ ದೋಷ ಸರಿಪಡಿಸಬೇಕು, ಪಿಒಎಸ್ ಬದಲು ಟ್ಯಾಬ್, ಸಂಪೂರ್ಣ ಮಾಹಿತಿಯುಳ್ಳ ರಸೀದಿ ಕೊಡಬೇಕು, ಎಲ್ಲ ಸಮಸ್ಯೆ ಬಗೆಹರಿಸಿದರೆ ಕರ ವಸೂಲಿ ಧಾರಿಸಲಿದೆ. | ಆರ್.ಪಾತಪ್ಪ ಕಾರ್ಯಾಧ್ಯಕ್ಷ, ರಾಜ್ಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಂಘ