

ಬೆಂಗಳೂರು: ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಹಾಗೂ 2, ಮತ್ತು ದ್ವಿತೀಯ ದರ್ಜೆ ಲೆಕ್ಕಸಹಾಯಕರ ವರ್ಗಾವಣೆ ಕೌನ್ಸೆಲಿಂಗ್ ಮೂಲಕ ನಡೆಯಲಿದೆ. ಇದಕ್ಕಾಗಿ ವೇಳಾಪಟ್ಟಿ ನಿಗದಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಗ್ರಾ ಪಂ ಕಾರ್ಯದರ್ಶಿ ಗ್ರೇಡ್-1, 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಶೇಕಡ9ರಷ್ಟು ಕಡ್ಡಾಯ ಸಾರ್ವಜನಿಕ ಹಿತಾಸಕ್ತಿ, ಸಾಮಾನ್ಯ ಕೋರಿಕೆ ವರ್ಗಾವಣೆ ಹಾಗೂ ಶೇ.6ರಷ್ಟು ವಿಶೇಷ ಪ್ರಕರಣಗಳ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್ ಜೂ.23ರಿಂದ ಜು.28ರವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ವರ್ಗಾವಣೆ ಹಾಗೂ ವಿಸ್ತರಣೆಗಾಗಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ ಜೂ.23. ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರುವ (ವರ್ಗಾವಣೆಗೆ ಅರ್ಹ) ಕಾರ್ಯದರ್ಶಿ ಗ್ರೇಡ್-1 ಮತ್ತು 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗರಿಷ್ಠ 5 ವರ್ಷ ಸೇವೆ ಸಲ್ಲಿಸಿರುವ (ಕಡ್ಡಾಯ ವರ್ಗಾವಣೆಗೆ ಅರ್ಹ)ವರು ಅರ್ಜಿ ಸಲ್ಲಿಸಬಹುದಾಗಿದೆ.
ಖಾಲಿ ಹುದ್ದೆಗಳ ಜಿಲ್ಲಾವಾರು ಪಟ್ಟಿ ಜೂ.24ಕ್ಕೆ ಪ್ರಕಟ, ಅರ್ಹರು ಹಾಗೂ ಖಾಲಿ ಹುದ್ದೆಗಳ ಜಿಲ್ಲಾವಾರು ಪಟ್ಟಿಗೆ ಆಯಾ ಜಿ.ಪಂ. ಸಿಇಒಗೆ ಅಪೀಲ್ ಸಲ್ಲಿಸಲು ಕೊನೆಯ ದಿನಾಂಕ ಜೂ.26. ಅರ್ಹರು ಹಾಗೂ ಖಾಲಿ ಹುದ್ದೆಗಳ ಜಿಲ್ಲಾವಾರು ಅಂತಿಮ ಪಟ್ಟಿ ಜೂ.30ಕ್ಕೆ ಪ್ರಕಟವಾಗಲಿದೆ.
ವರ್ಗಾವಣೆ ಹಾಗೂ ವಿಸ್ತರಣೆಆಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಜು.2 ಕೊನೇ ದಿನವಾಗಿದೆ. ಈ ಅರ್ಜಿಗಳನ್ನು ಜು.7ಕ್ಕೆ ಜಿ.ಪಂ. ಸಿಇಒಗಳು ಅಂತಿಮಗೊಳಿಸುವರು.
ತಿರಸ್ಕೃತ ವರ್ಗಾವಣೆ ಹಾಗೂ ವಿಸ್ತರಣೆ ಅರ್ಜಿಗಳಿಗೆ ಅಪೀಲ್ ಸಲ್ಲಿಸುವ ಕೊನೇ ದಿನಾಂಕ ಜು.9 ವರ್ಗಾವಣೆಯಿಂದ ವಿನಾಯತಿಗಾಗಿ ಕೋರಿಕೆ ಸಲ್ಲಿಸಿದವರ ಅನುಮೋದಿತ ಪಟ್ಟಿ ಜು.10ರಂದು ಪ್ರಕಟವಾಗಲಿದೆ.
ಕೌನ್ಸೆಲಿಂಗ್ ಅರ್ಜಿಗಳು ಹಾಗೂ ಪತಿ-ಪತ್ನಿ ಪ್ರಕರಣದಡಿ ಅಂತರ್ ಜಿಲ್ಲಾ ವರ್ಗಾವಣೆ ಅರ್ಜಿಗಳನ್ನು ಜಿ.ಪಂ. ಸಿಇಒ ಪರಿಶೀಲಿಸಿ ಜು.14ಕ್ಕೆ ಅಂತಿಮಗೊಳಿಸುವರು. ಸಾರ್ವಜನಿಕ ಹಿತಾಸಕ್ತಿಯ ಅಂತಿಮ ವರ್ಗಾವಣೆ ಆದ್ಯತಾ ಪಟ್ಟಿ ಹಾಗೂ ವಿಶೇಷ ಪ್ರಕರಣಗಳ ಅಂತಿಮ ವರ್ಗಾವಣೆ ಆದ್ಯತಾ ಪಟ್ಟಿ ಜು.16 ಮತ್ತು ಪತಿ ಪತ್ನಿ ಪ್ರಕರಣದಡಿ ಅಂತರ್ ಜಿಲ್ಲಾ ವರ್ಗಾವಣೆಗೆ ಆದ್ಯತಾ ಪಟ್ಟಿ ಜು.18ರಂದು ಪ್ರಕಟವಾಗಲಿದೆ.