

| ಸುಭಾಸ ಧೂಪದಹೊಂಡ ಕಾರವಾರ
ಗೌರಮ್ಮ ಎನ್.-ಎಂಕಾಂ ಗೋಲ್ಡ್ ಮೆಡಲಿಸ್ಟ್, ಸ್ವಾತಿ ಕೃಷ್ಣ ಬಿ.-ಎಂಟೆಕ್, ಅಂಬಿಕಾಬಾಯಿ ಕೆ.-ಎಂಎ ಅರ್ಥಶಾಸ್ತ್ರ, ಪ್ರಿಯಾಂಕಾ ಆರ್.-ಎಂಕಾಂ, ಲಕ್ಷ್ಮೀದೇವಿ-ಬಿಎಸ್ಸಿ, ಬಿಎಡ್ ಇದು ಯುಪಿಎಸ್ಸಿ ಪರೀಕ್ಷೆಯ ಆಯ್ಕೆ ಪಟ್ಟಿಯಲ್ಲ, ಬದಲಾಗಿ ರಾಜ್ಯದಲ್ಲಿ ಕಾರ್ಯನಿರ್ವಹಿಸಲಿರುವ ಮಹಿಳಾ ಪೊಲೀಸ್ ಕಾನ್ಸ್ಟೆಬಲ್ಗಳ ಹೆಸರು! ಉತ್ತರ ಕನ್ನಡ ಸೇರಿ ರಾಜ್ಯದ 13 ಜಿಲ್ಲೆಗಳಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೆಬಲ್ಗಳಾಗಿ ಕಾರ್ಯನಿರ್ವಹಿಸಲಿರುವ 121 ಸಿಬ್ಬಂದಿ ಬುಧವಾರ ಕಾರವಾರದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ತಮ್ಮ ಬುನಾದಿ ತರಬೇತಿ ಪೂರೈಸಿದ್ದಾರೆ. ಕನಿಷ್ಠ ಪಿಯುಸಿ ವಿದ್ಯಾರ್ಹತೆ ಹೊಂದಿದವರು ಪಡೆಯಬಹುದಾದ ಈ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿ ಹೊಂದಿದವರು ಪೈಪೋಟಿ ನೀಡುತ್ತಿದ್ದಾರೆ. ಬುಧವಾರ ನಿರ್ಗಮನ ಪಥಸಂಚಲನ ನಡೆಸಿ ಕರ್ತವ್ಯ ನಿರ್ವಹಿಸಲಿರುವ ಜಿಲ್ಲೆಗಳಿಗೆ ತೆರಳಿದ 121 ಲೇಡಿ ಪಿಸಿಗಳ ಪೈಕಿ 6 ಮಂದಿ ಮಾತ್ರ ಪಿಯುಸಿ ಓದಿದವರು. 13 ಬಿಇ ಪದವೀಧರರಿದ್ದಾರೆ. 26 ಸ್ನಾತಕೋತ್ತರ ಪದವೀಧರರಿದ್ದಾರೆ. 73 ಪದವೀಧರ ಅಭ್ಯರ್ಥಿಗಳಿದ್ದಾರೆ ಎಂಬುದು ವಿಶೇಷ.
ಏಕೆ ಹೀಗೆ?: ಸರ್ಕಾರಿ ಉದ್ಯೋಗಕ್ಕಾಗಿ ಸಾಕಷ್ಟು ಪೈಪೋಟಿ ಇದೆ. ಉನ್ನತ ಶಿಕ್ಷಣ ಪಡೆದವರಿಗೂ ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ. ಆದರೆ, ಓದಿದ ನಂತರ ಪಾಲಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ಹೆಚ್ಚಿನವರು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಾರೆ. ಒಂದು ಸರ್ಕಾರಿ ಹುದ್ದೆ ಗಿಟ್ಟಿಸಿಕೊಂಡ ನಂತರ ಅಲ್ಲಿ ಕರ್ತವ್ಯ ನಿರ್ವಹಿಸುತ್ತ ಮುಂದೆ ಕಷ್ಟಪಟ್ಟು ಓದಿ ಉನ್ನತ ಹುದ್ದೆಗೆ ತೆರಳುತ್ತಾರೆ. ಇತ್ತೀಚೆಗೆ ಪೊಲೀಸ್ ಕಾನ್ಸ್ಟೆಬಲ್ಗಳಾಗಿ ಆಯ್ಕೆಯಾಗುವ ಶೇ.90 ಅಭ್ಯರ್ಥಿಗಳು ಕನಿಷ್ಠ ಪದವೀಧರರಾಗಿರುತ್ತಾರೆ ಎಂಬುದು ಪೊಲೀಸ್ ತರಬೇತಿ ಶಾಲೆಯ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯ.