ಬಹುಮುಖಿ ವ್ಯಕ್ತಿತ್ವದ ಪದವೀಧರರಾಗಿ

ATNC
ಎಟಿಎನ್‌ಸಿ ಕಾಲೇಜಿನ ಪದವಿ ಪ್ರದಾನ ಕಾರ್ಯಕ್ರಮವನ್ನು ತಹಸೀಲ್ದಾರ್ ಬಿ.ಎನ್.ಗಿರೀಶ್ ಉದ್ಘಾಟಿಸಿದರು. ಡಾ. ರಕ್ಷಾ ರಾವ್, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಪ್ರೊ.ಕೆ.ಎಂ.ನಾಗರಾಜು, ಪ್ರೊ.ಪಿ.ಆರ್.ಮಮತಾ ಮುಂತಾದವರಿದ್ದರು.
Published on

ಶಿವಮೊಗ್ಗ: ಸಮಾಜದಲ್ಲಿ ನಮ್ಮ ಬೆಳವಣಿಗೆಯ ದಾರಿಗೆ ಶೈಕ್ಷಣಿಕ ಪದವಿ ದೀಪವಾಗಬೇಕು. ವಿದ್ಯಾರ್ಥಿಗಳು ಬಹುಮುಖಿ ವ್ಯಕ್ತಿತ್ವದ ಪದವೀಧರರಾಗಬೇಕು ಎಂದು ತಹಸೀಲ್ದಾರ್ ಬಿ.ಎನ್.ಗಿರೀಶ್ ಹೇಳಿದರು.

ನಗರದ ಎಟಿಎನ್‌ಸಿ ಕಾಲೇಜಿನಿಂದ ಮಂಗಳವಾರ ಅಂತಿಮ ವರ್ಷದ ಬಿಕಾಂ, ಬಿಬಿಎ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪದವಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೀತಿ, ತತ್ವ, ಪ್ರಾಮಾಣಿಕತೆ ಎಂಬುದು ಪ್ರತಿಜ್ಞಾ ವಿಧಿಗೆ ಸೀಮಿತವಾಗದಿರಲಿ. ಪದವಿಯ ನಂತರವೇ ಬದುಕಿನ ವಾಸ್ತವಾಂಶ ತಿಳಿಯಲಿದೆ. ಪ್ರಾಮಾಣಿಕತೆ ಎಂಬುದು ಬದುಕಿನುದ್ದಕ್ಕೂ ಕಾಪಾಡಿಕೊಳ್ಳಬೇಕು ಎಂದರು.
ಅನಕ್ಷರಸ್ಥರಿಗೆ ಇರುವ ಆತ್ಮವಿಶ್ವಾಸ ಇಂದಿನ ಪದವೀಧರರಿಗೆ ಇಲ್ಲದಿರುವುದು ವಿಪರ್ಯಾಸ. ಸಣ್ಣ ಸೋಲುಗಳಿಂದ ಹೊರಬರಲಾಗದೆ ಕೆಲವರು ಆತ್ಮಹತ್ಯೆ ಆಲೋಚನೆ ಮಾಡುವುದು ಬೇಸರದ ಸಂಗತಿ. ಇಂದು ಅನೇಕ ಪದವಿಗಳನ್ನು ಪಡೆದ ಯುವಕರು ಕೃಷಿಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಅಂಥವರಿಂದ ಪ್ರೇರಣೆ ಪಡೆಯಬೇಕು ಎಂದು ಹೇಳಿದರು.
ಸ್ತ್ರೀರೋಗ ತಜ್ಞೆ ಡಾ. ರಕ್ಷಾ ರಾವ್ ಮಾತನಾಡಿ, ಗ್ರಾಜ್ಯುಯೇಷನ್ ದಿನ ಎಂಬುದು ವಿದ್ಯಾರ್ಥಿ ಜೀವನದ ಸಾರ್ಥಕ ಸಂದರ್ಭ. ಪದವಿಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಅದು ನಾವು ಮಾಡಬಹುದಾದ ದೇಶ ಸೇವೆ. ಜೀವನ ಪಥದಲ್ಲಿ ಯಶಸ್ಸಿಗೆ ಐಕ್ಯೂ ಜತೆಗೆ ಪರಿಸ್ಥಿತಿಗಳ ನಿರ್ವಹಣಾ ಕೌಶಲ ನಿಮ್ಮದಾಗಲಿ ಎಂದರು.
ಎನ್‌ಇಎಸ್ ನಿರ್ದೇಶಕ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಪ್ರಾಚಾರ್ಯೆ ಪ್ರೊ.ಪಿ.ಆರ್.ಮಮತಾ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಕೆ.ಎಂ.ನಾಗರಾಜು, ವಾಣಿಜ್ಯ ವಿಭಾಗದ ನಿರ್ದೇಶಕ ಎನ್.ಮಂಜುನಾಥ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net