

ಬೆಂಗಳೂರು: ಮಾ.7ರಂದು ನಡೆದ ದ್ವಿತೀಯ ಪಿಯುಸಿ ಭೌತಶಾಸ ಪರೀಕ್ಷೆಗೆ ಕೃಪಾಂಕ ನೀಡಲಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಯಾರೂ ನಂಬಬೇಡಿ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸ್ಪಷ್ಟನೆ ನೀಡಿದೆ.
ಬಹುಪಾಲು ವಿದ್ಯಾರ್ಥಿಗಳ ವಿನಂತಿಯಂತೆ ಮಾ.7ರಂದು ನಡೆದ ಭೌತಶಾಸ ಪರೀಕ್ಷೆಯಲ್ಲಿ ಬ್ಲೂಪ್ರಿಂಟ್‌ಗೆ ಅನುಗುಣವಾಗಿಲ್ಲದ ಎಲ್ಲ ಹಾಟ್ಸ್ ಪ್ರಶ್ನೆಗಳಿಗೆ ಗ್ರೇಸ್ ಅಂಕಗಳನ್ನು ನೀಡಲು ಮಂಡಳಿಯು ಒಪ್ಪಿಕೊಂಡಿದೆ.
ವಿದ್ಯಾರ್ಥಿಗಳು ಪಠ್ಯಪುಸ್ತಕವನ್ನು ಅಧ್ಯಯನ ಮಾಡಬೇಕಾಗಿರುವ ಕಾರಣದಿಂದ ಮತ್ತು ಎಲ್ಲ ಪ್ರಶ್ನೆಗಳು ಎನ್‌ಸಿಇಆರ್‌ಟಿ ಪಠ್ಯಪುಸ್ತಕದಿಂದ ಬಂದಿರುವುದರಿಂದ ಬೇರೆ ವಿಷಯಕ್ಕೆ ಇಂತಹ ಕ್ರಮವನ್ನು ಮತ್ತೆ ತೆಗೆದುಕೊಳ್ಳಲಾಗುವುದಿಲ್ಲ ಎಂಬುದನ್ನು ಗಮನಿಸಲಾಗಿದೆ.
ಆದ್ದರಿಂದ ಮಂಡಳಿಯು ಭಾಗ ‘ಎ’ಯಲ್ಲಿನ ನೀಲಿನಕ್ಷೆಯ ಪ್ರಕಾರ ಇಲ್ಲದ ಎಂಸಿಕ್ಯುಗಳನ್ನು ಪ್ರಯತ್ನಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಕೃಪಾಂಕಗಳನ್ನು ನೀಡಲು ನಿರ್ಧರಿಸಿದೆ. ಪ್ರಶ್ನೆಗಳನ್ನು ಬಿಟ್ಟ ವಿದ್ಯಾರ್ಥಿಗಳು ಯಾವುದೇ ಗ್ರೇಸ್ ಅಂಕಗಳನ್ನು ಪಡೆಯುವುದಿಲ್ಲ ಎಂಬ ನಕಲು ಆದೇಶ ಪ್ರತಿಯು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಇದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ದಾರಿ ತಪ್ಪುವುದು ಮತ್ತು ತಪ್ಪು ಮಾಹಿತಿಯನ್ನು ಪಡೆಯುವುದ ಬೇಡ. ಇದೊಂದು ನಕಲು ಪ್ರತಿಯಾಗಿದ್ದು, ಮಂಡಳಿಯಿಂದ ಇಂತಹ ಯಾವುದೇ ಆದೇಶಗಳನ್ನು ಮತ್ತು ನಿರ್ಧಾರಗಳನ್ನು ಕೈಗೊಂಡಿಲ್ಲ ಎಂದು ಮಂಡಳಿ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ.