

ಬೆಂಗಳೂರು: ಗ್ರಾಮ ಪಂಚಾಯತಿಗಳ ಆಸ್ತಿ ತೆರಿಗೆ ಸಂಗ್ರಹಿಸುವ(Gram Panchayat property tax collection) ಪ್ರಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಈ ತಿಂಗಳಾಂತ್ಯದೊಳಗೆ ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ(Priyankh Kharge) ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಮ್ಮೇಳನ ನಡೆಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಾಮರ್ಶಿಸಿದರು.
ಪಂಚಾಯಿತಿ ಅಭಿವೃದ್ಧಿ ದೃಷ್ಟಿಯಿಂದ ತೆರಿಗೆಯನ್ನು ಸಮರ್ಪವಾಗಿ ಸಂಗ್ರಹಿಸುವ ಅನಿವಾರ್ಯತೆ ಇದೆ ಎಂದೂ ಹೇಳಿದರು.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುವ ಮೂಲಕ ತಿಂಗಳಿಗೊಮ್ಮೆ ತೆರಿಗೆ ಸಂಗ್ರಹ ಸಲುವಾಗಿಯೇ ಸಭೆ ನಡೆಸಬೇಕೆಂದು ಸೂಚಿಸಿದರು.
ಗ್ರಾಮಸಭೆಗಳನ್ನು ನಡೆಸುವಲ್ಲಿ ಕೆಲವು ಗ್ರಾಮ ಪಂಚಾಯತಿಗಳು ಆಸಕ್ತಿ ತೋರದಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಸಚಿವರು, ಸೋಷಿಯಲ್ ಆಡಿಟ್ ಆಗದೆ ಅನುದಾನ ನಿರೀಕ್ಷಿಸಲು ಸಾಧ್ಯವಿಲ್ಲ. ಇದರಿಂದ ಗ್ರಾಮಗಳ ಅಭಿವೃದ್ಧಿಗೆ ತೊಂದರೆಯಾಗುತ್ತದೆ. ಆದ್ದರಿಂದ ಗ್ರಾಮಸಭೆಗಳನ್ನು ನಡೆಸಲು ಸೂಕ್ತ ನಿರ್ದೇಶನ ನೀಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ಜಲಜೀವನ್ ಮಿಷನ್ ಕಾರ್ಯಕ್ರಮದಡಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆವಹಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಕಳಪೆ ಸಾಮಗ್ರಿಗಳ ಬಳಕೆ ಮಾಡದಂತೆ ಹಾಗೂ ಗುಣಮಟ್ಟವಿಲ್ಲದ ಕಾಮಗಾರಿಗಳು ನಡೆಯದಂತೆ ತಡೆಯಬೇಕು. ಗ್ರಾಮೀಣ ಜನರ ಮನೆ ಮನೆಗೆ ನೀರು ತಲುಪಿಸುವ ಈ ಯೋಜನೆಯಲ್ಲಿ ಸರ್ಕಾರದ ಹಣ ಸಮರ್ಪವಾಗಿ ಬಳಕೆಯಾಗುವಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಸರ್ಕಾರ ಈ ವರ್ಷದ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಘೋಷಿಸಿದ ಕಲ್ಯಾಣಪಥ ಯೋಜನೆಯನ್ನು ಈ ತಿಂಗಳು ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಲಿದ್ದಾರೆ ಎಂದೂ ಪ್ರಕಟಿಸಿದರು.
ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಕಚೇರಿ ಸೂಚಿಸಿರುವ ಮಾನದಂಡಗಳಂತೆ ಕಾಮಗಾರಿ ಅನುಷ್ಠಾನಗೊಳಿಸಬೇಕು. ಮಾನದಂಡಗಳನ್ನು ಬದಲಿಸಿ ಕಾಮಗಾರಿ ಕೈಗೊಳ್ಳುವ ಎಂಜಿನಿಯರುಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಜಿಲ್ಲಾ ಮಟ್ಟದಲ್ಲಿ ಸಿಇಒಗಳು ಹಾಗೂ ಇತರ ಅಧಿಕಾರಿಗಳು ಜಿಲ್ಲೆಯ 19 ಗ್ರಾಮ ಪಂಚಾಯಿತಿಗಳನ್ನು ದತ್ತು ಪಡೆದು ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ಹಾಕಿಕೊಳ್ಳಲು ಸೂಚಿಸಲಾಗಿತ್ತು, ಈ ಬಗ್ಗೆ ಯಾವುದೇ ಕ್ರಮ ಆಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.