ಗ್ರಾಪಂ, ವಾರ್ಡ್ ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕ : ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಹೇಳಿಕೆ ಅಧಿಕಾರಿಗಳೊಂದಿಗೆ ವರ್ಚುವಲ್ ಮೀಟಿಂಗ್

28 KKP 02
Published on

ರಾಮನಗರ : ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್

ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ತಿಳಿಸಿದರು.

ಅಧಿಕಾರಿಗಳೊಂದಿಗೆ ಬುಧವಾರ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಐಎಲ್‌ಐ, ಎಸ್‌ಎಆರ್‌ಐ ಲಕ್ಷಣವುಳ್ಳವರು ಕರೊನಾ ಪರೀಕ್ಷೆಗೆ ತಪ್ಪದೇ ಒಳಗಾಗಬೇಕು. ಈ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾವಹಿಸಲು ನೋಡಲ್ ಅಧಿಕಾರಿಗನ್ನು ನೇಮಕ ಮಾಡಲಾಗುತ್ತಿದೆ ಎಂದರು.

ಕೆಪಿಎಂಇ ನೋಂದಾಯಿತ ಕ್ಲಿನಿಕ್‌ಗಳು ತಪ್ಪದೇ ಐಎಲ್‌ಐ, ಎಸ್‌ಎಆರ್‌ಐ ರೋಗಿಗಳ ವಿವರವನ್ನು ಪ್ರತಿ ದಿನ ನೀಡಬೇಕು. ಆದರೆ, ಕೆಲವು ಕ್ಲಿನಿಕ್‌ಗಳು ಮಾಹಿತಿ ನೀಡುತ್ತಿಲ್ಲ. ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕ್ಲಿನಿಕ್‌ಗಳನ್ನು ಪರಿಶೀಲಿಸಬೇಕು. ಕೆಲವರು ಮೆಡಿಕಲ್ ಸ್ಟೋರ್‌ಗಳಲ್ಲಿ ಕೆಮ್ಮು, ನೆಗಡಿ, ಜ್ವರಕ್ಕೆ ಸಂಬಂಧಿಸಿದಂತೆ ಔಷಧ ಪಡೆಯುವವರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಇದರಿಂದ ಪ್ರಾಥಮಿಕ ಹಂತದಲ್ಲೇ ಐ.ಎಲ್.ಐ, ಎಸ್.ಎ.ಆರ್. ಐ ಪ್ರಕರಣಗಳನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಬಹುದು ಎಂದರು.

ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕರೊನಾ ಪ್ರಕರಣಗಳ ವಿವರವನ್ನು ವಾರ್ ರೂಂನಿಂದ ಪಡೆದುಕೊಂಡು ಅವರನ್ನು ಮುಂದಿನ ಚಿಕಿತ್ಸೆಗೆ ಕೋವಿಡ್ ಕೇರ್ ಸೆಂಟರ್, ಹೋಮ್ ಐಸೋಲೇಷನ್, ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿರುವ ಬಗ್ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ. ಇದರಿಂದ ಅವರಿಗೆ ಚಿಕಿತ್ಸೆ ಪ್ರಾರಂಭವಾಗಿರುವ ಬಗ್ಗೆ ಖಾತ್ರಿಯಾಗುತ್ತದೆ. ಹೋಮ್ ಐಸೊಲೇಷನ್ ಪ್ರಕರಣಗಳನ್ನು ಅಶಾ ಕಾರ್ಯಕರ್ತೆಯರು ಭೇಟಿ ನೀಡಿ ಪರಿಶೀಲಿಸಬೇಕಿರುತ್ತದೆ. ಈ ಬಗ್ಗೆ ನೋಡಲ್ ಅಧಿಕಾರಿಗಳು ನಿಗಾ ವಹಿಸಬೇಕಿರುತ್ತದೆ ಎಂದರು.

ಪಟ್ಟಿ ನೀಡಿ : ಗ್ರಾಮ ಮಟ್ಟದಲ್ಲಿ ಕರೊನಾ ಲಕ್ಷಣಗಳು ಕಂಡು ಬಂದರೆ ಪರೀಕ್ಷೆಗೆ ಒಳಪಡಬೇಕು. ಪ್ರಾಥಮಿಕ ಹಂತದಲ್ಲೇ ಗುರುತಿಸಿದರೆ ಚಿಕಿತ್ಸೆ ಪಡೆದುಕೊಂಡು ಗುಣವಾಗಬಹುದು ಎಂದ ಡಿಸಿ, ಪ್ರತಿ ದಿನ ಅರಿವು ಮೂಡಿಸುವ ಐ.ಇ.ಸಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಒಟ್ಟಿಗೆ ಸೇರಿ ಗ್ರಾಮ ಹಾಗೂ ವಾರ್ಡ್‌ವಾರು ನೋಡಲ್ ಅಧಿಕಾರಿಗಳ ಪಟ್ಟಿ ಕಳುಹಿಸಿಕೊಡಿ ಕೂಡಲೇ ಆದೇಶ ಹೊರಡಿಸಲಾಗುವುದು. ಇದರಿಂದ ಹೆಚ್ಚಿನ ಅಧಿಕಾರಿಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬಹುದು ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಸ್. ನಿರಂಜನ್, ತಾಲೂಕುಗಳ ತಹಸೀಲ್ದಾರ್ ಉಪಸ್ಥಿತರಿದ್ದರು.

ಕರೊನಾ ಸೋಂಕಿತರ ಮನೆಗೆ ಡಿಸಿ ಭೇಟಿ

ಕನಕಪುರ : ತಾಲೂಕು ಕೋವಿಡ್ ಪ್ರಗತಿಪರಿಶೀಲನಾ ಸಭೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಕೋವಿಡ್ ವಾರ್ ರೂಂ, ಕೋವಿಡ್ ಕೇರ್ ಸೆಂಟರ್ ಹಾಗೂ ಕರೊನಾ ಸೋಂಕಿತನ ಮನೆಗೆ ಭೇಟಿ ನೀಡಿ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಿದರು.

ರಾಮನಗರ ರಸ್ತೆಯ ಹೊಸಕೋಟೆ ಗ್ರಾಮದ ಬಳಿಯಿರುವ ಕೋವಿಡ್ ಕೇರ್ ಸೆಂಟರ್ ಹಾಗು ವಿವೇಕಾನಂದ ನಗರದ ಸೋಂಕಿತರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ, ಯೋಗಕ್ಷೇಮವನ್ನು ವಿಚಾರಿಸಿದರು. ಕೋವಿಡ್ ವಾರ್ ರೂಂಗಳಲ್ಲಿ ರೋಗಿಗಳ ಚಿಕಿತ್ಸೆ, ಔಷಧಿ, ಊಟೋಪಚಾರ ಹಾಗೂ ಸಮರ್ಪಕವಾಗಿ ಚಿಕಿತ್ಸೆ ದೊರೆಯುತ್ತಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ತಹಸೀಲ್ದಾರ್ ವಿ.ಆರ್.ವಿಶ್ವನಾಥ್, ಶಿರಸ್ತೇದಾರ್ ರಘು,

ಟಿಜಿಎಚ್‌ಒ ಡಾ.ಬಿ.ನಂದಿನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net