ಗೌಡಗೆರೆಯಲ್ಲಿ ಚಾಮುಂಡೇಶ್ವರಿ ವಿಗ್ರಹ ಸಿದ್ಧ: 60 ಅಡಿ ಎತ್ತರ 18 ಭುಜದ ಪಂಚಲೋಹದ ಸೌಮ್ಯಮೂರ್ತಿ 8ರಂದು ಅನಾವರಣ

5-cpt-2p
Published on

ಚನ್ನಪಟ್ಟಣ : ಅರವತ್ತು ಅಡಿ ಎತ್ತರದ ಚಾಮುಂಡೇಶ್ವರಿ ದೇವಿಯ ಪಂಚಲೋಹದ ವಿಗ್ರಹವನ್ನು ಆ.8ರ ಭಾನುವಾರ ಲೋಕಾರ್ಪಣೆ ಮಾಡಲಾಗುವುದು ಎಂದು ಗೌಡಗೆರೆಯ ಚಾಮುಂಡೇಶ್ವರಿ ಮತ್ತು ಪವಾಡ ಬಸವಪ್ಪ ಪುಣ್ಯ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ತಿಳಿಸಿದರು.

ಶ್ರೀ ಕ್ಷೇತ್ರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಶಿಯಾತ್ರೆ ಕೈಗೊಂಡಿದ್ದ ಸಮಯದಲ್ಲಿ ಎದುರಾದ ನಾಗಾ ಸಾಧುಗಳು ಕ್ಷೇತ್ರದ ಬಗ್ಗೆ ವಿವರ ತಿಳಿದುಕೊಂಡು ನಿಮ್ಮ ಕ್ಷೇತ್ರದಲ್ಲಿ ತಾಯಿಯ ಬೃಹತ್ ಪ್ರತಿಮೆ ನಿರ್ಮಿಸಲು ಸೂಚಿಸಿದರು. ಆರಂಭದಲ್ಲಿ ಕಲ್ಲಿನ ಪ್ರತಿಮೆ ನಿರ್ಮಿಸಲು ಮುಂದಾಗಿದ್ದೆವು. ಆದರೆ, ಅದಕ್ಕೆ ಹಲವು ವಿಘ್ನಗಳು ಎದುರಾದವು. ತದನಂತರ, ಚಿನ್ನ, ಬೆಳ್ಳಿ, ಕಂಚು, ತಾಮ್ರ ಮತ್ತು ಕಬ್ಬಿಣ ಸೇರಿಸಿ ಪಂಚ ಲೋಹದ ದೇವಿಯ ಬೃಹತ್ ವಿಗ್ರಹ ಸ್ಥಾಪನೆಗೆ ಸಂಕಲ್ಪ ಮಾಡಿದೆ. ಇದೀಗ, ಎಲ್ಲರ ಸಹಕಾರ ಹಾಗೂ ದೇವಿಯ ಆಶೀರ್ವಾದದಿಂದ ಇದು ಸಾಕಾರಗೊಂಡಿದೆ ಎಂದು ಮಾಹಿತಿ ನೀಡಿದರು.

18 ಭುಜದ ಸೌಮ್ಯಮೂರ್ತಿಯ ತಾಯಿ: ತಾಯಿ ಚಾಮುಂಡೇಶ್ವರಿ ದೇವಿಯ ವಿವಿಧ ಬೃಹತ್ ವಿಗ್ರಹಗಳು ಇವೆಯಾದರೂ, ಪಂಚಲೋಹದಲ್ಲಿ ಇಷ್ಟು ಎತ್ತರದ ವಿಗ್ರಹ ನಿರ್ಮಾಣವಾಗಿರುವುದು ಇದೇ ಮೊದಲು. ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ದೇವಿಗೆ 18 ಭುಜಗಳಿದ್ದು, ಇದು ದೇವಿಯ 18 ಶಕ್ತಿಪೀಠಗಳನ್ನು ಸೂಚಿಸುತ್ತದೆ. ದೇವಿಯ ವಿಗ್ರಹ ಸೌಮ್ಯ ರೂಪದಿಂದ ಕೂಡಿದೆ. ಇಡೀ ವಿಗ್ರಹಕ್ಕೆ ಸ್ವರ್ಣಲೇಪನ ಮಾಡಲಾಗಿದೆ. ಸಿಂಹಾರೂಢ ತಾಯಿಯ ವಿಗ್ರಹ ಮನವೋಹಕವಾಗಿ ರೂಪುಗೊಂಡಿದ್ದು, ಮೂರ್ತಿಯ ಹಿಂಬದಿಯಲ್ಲಿ 100 ಅಡಿ ಎತ್ತರದ ಜಲಪಾತವನ್ನು ಮುಂದಿನ ದಿನಗಳಲ್ಲಿ ನಿರ್ಮಿಸಲಾಗುತ್ತದೆ. ತೆರೆದ ಬಯಲಿನಲ್ಲಿ ದೇವಿಯನ್ನು ಭಕ್ತರ ದರ್ಶನಕ್ಕೆ ಇರಿಸಲಾಗುತ್ತದೆ ಎಂದು ತಿಳಿಸಿದರು.

ಧರ್ಮಗಳಲ್ಲಿ ಉಲ್ಲೇಖಿಸಿರುವಂತೆ ಶಿಲ್ಪಶಾಸ್ತ್ರಕ್ಕೆ ಅನುಗುಣವಾಗಿ ದೇವಿಯ ವಿಗ್ರಹ ನಿರ್ಮಿಸಲಾಗಿದೆ. ಪ್ರಾಕೃತಿಕ ವೈಪರೀತ್ಯಗಳಿಂದ ದೇವಿಯ ವಿಗ್ರಹಕ್ಕೆ ಧಕ್ಕೆಯಾಗದ ತಂತ್ರಜ್ಞಾನ ಬಳಸಲಾಗಿದೆ. ಆ.8ರ ಭೀಮನ ಅಮಾವಾಸ್ಯೆಯಂದು ಚಂಡಿಕಾ ಹೋಮ ಮಾಡಿ ದೇವಿಗೆ ಶಕ್ತಿ ನೀಡಲಾಗುವುದು. ಅಂದೇ ದೇವಿಯ ಪ್ರತಿಮೆ ಅನಾವರಣ ಮಾಡಲಾಗುವುದು ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುವುದು. ವಿವಿಧ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಆಗಮಿಸಲಿದ್ದಾರೆ. ಭಕ್ತರಿಗೆ ದರ್ಶನ ಮತ್ತು ಪೂಜೆಗೆ ಅವಕಾಶ ಕಲ್ಪಿಸಲಾಗಿದೆ.

ಮುಸ್ಲಿಂ ಶಿಲ್ಪಿ

ದೇವಿಯ ಪ್ರತಿಮೆ ನಿರ್ಮಿಸಿರುವುದು ಬೆಂಗಳೂರು ಮೂಲದ ಪಠಾಣ್ ಎಂಬ ಮುಸ್ಲಿಂ ಶಿಲ್ಪಿ. ಇವರೊಂದಿಗೆ ವಿವಿಧ ಕುಶಲ ಕರ್ಮಿಗಳು ಕೈಜೋಡಿಸಿ ವಿಗ್ರಹಕ್ಕೆ ಅಂತಿಮರೂಪ ನೀಡಿದ್ದಾರೆ. ಇದರೊಂದಿಗೆ ದೇವಾಲಯ ಟ್ರಸ್ಟ್‌ನ ಪದಾಧಿಕಾರಿಗಳು, ಭಕ್ತರು ಕೈಜೋಡಿಸಿದ್ದಾರೆ. ಎಲ್ಲರ ಸಹಕಾರದೊಂದಿಗೆ ಅತಿ ಎತ್ತರದ ಮನವೋಹಕ ದೇವಿಯ ವಿಗ್ರಹ ಕ್ಷೇತ್ರದಲ್ಲಿ ಅನಾವರಣಗೊಳ್ಳುತ್ತಿರುವುದು ಸಂತಸ ಮೂಡಿಸಿದೆ ಎಂದು ಮಲ್ಲೇಶ್ ಗುರೂಜಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net