

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೇರಿ ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿರುವ ಅಂದಾಜು 50 ಸಾವಿರ ಕೋಟಿ ರೂ. ವೆಚ್ಚದ ಅವ್ಯವಹಾರದ ಕುರಿತು ಸಿಬಿಐ ತನಿಖೆ ನಡೆಸಲು ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ಮೈಸೂರಿನ ಕೆ.ಆರ್. ನಗರದ ವಕೀಲ ಸಿ. ಸಂತೋಷ್ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಪ್ರತಿವಾದಿ ಮಾಡಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಇದೊಂದು ಬಹುದೊಡ್ಡ ಹಗರಣವಾಗಿದ್ದು, ಸೂಕ್ತ ಕಾನೂನು ಕ್ರಮ ಜರಗಿಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ. ರಾಜಕೀಯ ಪಕ್ಷದ ಮುಖಂಡರು ಪರಸ್ಪರ ಆರೋಪ ಮಾಡುವ ಮೂಲಕ ಹಗರಣಗಳನ್ನು ಮುಚ್ಚಿ ಹಾಕಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.
ಈ ಹಗರಣಗಳ ಸತ್ಯಾಂಶ ಬೆಳಕಿಗೆ ಬಂದು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕಿದೆ. ಸಾರ್ವಜನಿಕ ಹಣ ಹಾಗೂ ಆಸ್ತಿಯನ್ನು ಮರಳಿ ಸರ್ಕಾರದ ಸುಪರ್ದಿಗೆ ಪಡೆಯಬೇಕಿದೆ. ಈ ಹಗರಣವನ್ನು ಸಿಬಿಐ ತನಿಖೆ ನಡೆಸಿದರೆ, ಮುಂದಿನ ದಿನಗಳಲ್ಲಿ ಸರ್ಕಾರದ ಸಂಪತ್ತು ರಕ್ಷಣೆಯಾಗಲಿದೆ. ಆದ್ದರಿಂದ ಈ ಎಲ್ಲ ಹಗರಣಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಅರ್ಜಿಯಲ್ಲಿ ಏನಿದೆ?
2015ರಲ್ಲಿ ನೀರಾವರಿ ಯೋಜನೆ ಅಕ್ರಮದಲ್ಲಿ 40 ಕೋಟಿ ರೂ.2019 ರಿಂದ 23ರ ಅವಧಿಯಲ್ಲಿ ಕಿಯೋನಿಕ್ಸ್‌ನಲ್ಲಿ 500, ಕೋವಿಡ್-19 ಹೆಸರಿನಲ್ಲಿ 40 ಸಾವಿರ, ಪಿಎಸ್‌ಐ ನೇಮಕಾತಿಯಲ್ಲಿ 100, ಸರ್ಕಾರಿ ಗುತ್ತಿಗೆ ಮಂಜೂರಾತಿಯಲ್ಲಿ ಶೇ.40 ಕಮಿಷನ್ ನಿಂದ 2 ಸಾವಿರ, 2020-21ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯಲ್ಲಿ 200, ಎಪಿಎಂಸಿಯಲ್ಲಿ 47.16, ಭೋವಿ ಅಭಿವೃದ್ಧಿ ನಿಗಮದಲ್ಲಿ 87, ಗಂಗಾ ಕಲ್ಯಾಣ ಯೋಜನೆಯಲ್ಲಿ 430, ಬಿಟ್‌ಕಾಯಿನ್ ಹಗರಣದಲ್ಲಿ 1 ಸಾವಿರ, ಬಿ.ಎಸ್.ಯಡಿಯೂರಪ್ಪ ಅಕ್ರಮ ಸಂಪಾದನೆ 750, ನಾಲ್ಕು ವೈದ್ಯಕೀಯ ಕಾಲೇಜು ಹಗರಣದಲ್ಲಿ 300, 2022-23ನೇ ಸಾಲಿನಲ್ಲಿ ದೇವರಾಜು ಅರಸ್ ಟ್ರಕ್ ಟರ್ಮಿನಲ್ ನಲ್ಲಿ 50 ಕೋಟಿ ಹಣ ಮತ್ತು ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನಲ್ಲಿ ಕೋಟ್ಯಂತರ ಹಣದ ಅವ್ಯವಹಾರ ನಡೆದಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಅಲ್ಲದೆ, ಕರ್ನಾಟಕ ಮಹರ್ಷಿ ವಾಲ್ಮೀಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ಹಣ ಅವ್ಯವಹಾರವಾಗಿದೆ. ಹಾಗೆಯೇ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಐದು ಸಾವಿರ ಕೋಟಿ ರು, ಹಗರಣದ ನಡೆದಿದೆ. ರಾಜ್ಯದ ವಿವಿಧ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆಸಿದ್ದು, ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ಈ ಕುರಿತು ವಿದ್ಯುನ್ಮಾನ ಮಾಧ್ಯಮಗಳು, ಪತ್ರಿಕೆ, ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.