

ನವದೆಹಲಿ: ಭಾರತ ಖಂಢಗ್ರಾಸ ಗ್ರಹಣದ ಗುಂಗಿಗೆ ಜಾರಿರುವಾಗಲೇ ಕೋವಿಡ್ 19 ಸೋಂಕಿನ ಹೆಸರಿನಲ್ಲಿ ಭಾರಿ ಪ್ರಮಾಣದ ಸೈಬರ್ ಅಟ್ಯಾಕ್ ನಡೆಯಲಿದೆ. ವ್ಯಕ್ತಿಗತವಾಗಿ ಮತ್ತು ವ್ಯಾಪಾರೋದ್ಯಮಗಳೇ ಈ ದಾಳಿಯ ಗುರಿ ಆಗಿರಲಿದೆ. ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿ ಕಳವು ಮಾಡಿ ನಂತರದಲ್ಲಿ ದೋಚುವ ಪ್ರಯತ್ನ ಮಾಡಬಹುದು ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್ಟಿ-ಇನ್) ಎಚ್ಚರಿಸಿದೆ.
ಭಾರತದ ಸೈಬರ್ ಸೆಕ್ಯುರಿಟಿ ನೋಡೆಲ್ ಏಜೆನ್ಸಿ ಸಿಇಆರ್ಟಿ-ಇನ್. ಸಂಭಾವ್ಯ ಪಿಶಿಂಗ್ ದಾಳಿಯ ಬಗ್ಗೆ ಎಚ್ಚರ ವಹಿಸುವಂತೆ ಈ ಸಂಸ್ಥೆ ಎಚ್ಚರಿಕೆ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಸರ್ಕಾರಿ ಸಂಸ್ಥೆಗಳು, ಇಲಾಖೆಗಳು, ವಾಣಿಜ್ಯ ಸಂಸ್ಥೆಗಳು ವಿಶೇಷವಾಗಿ ಸರ್ಕಾರಿ ಅನುದಾನವನ್ನು ಹಂಚುವ ವಿಭಾಗಗಳ ಕಂಪ್ಯೂಟರ್ಗಳ ಮೇಲೆ ಇಂತಹ ದಾಳಿ ಆಗಲಿವೆ. ಈ ದಾಳಿ ನಾಳೆಯಿಂದಲೇ ಶುರುವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಹಸು, ಗಂಗಾ, ಗೀತೆ ಇವುಗಳು ಭಾರತದ ಐಡೆಂಟಿಟಿ
ಸೈಬರ್ ಅಟ್ಯಾಕ್ ನಡೆಸುವುದಕ್ಕೆ ದಾಳಿಕೋರರು "ncov2019@gov.in" ಈ ರೀತಿಯ ಇ-ಮೇಲ್ಗಳನ್ನು ಬಳಸುವ ಸಾಧ್ಯತೆ ಇದೆ.ಕೋವಿಡ್ 19 ತಡೆಯ ಚಟುವಟಿಕೆಗೆ ಸಂಬಂಧಿಸಿ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಹಂಚುವ ಸ್ಥಳೀಯಾಡಳಿತದ ಅಧಿಕಾರಿಗಳಿಗೆ ಇಂತಹ ಇ-ಮೇಲ್ಗಳು ರವಾನೆಯಾಗಬಹುದು. ಅದನ್ನು ತೆರೆದು ಉತ್ತರಿಸಲು ಪ್ರಯತ್ನಿಸಿದರೆ ಕಳ್ಳ ವೆಬ್ಸೈಟ್ಗಳು ಓಪನ್ ಆಗಿ ಸಿಸ್ಟಂನಲ್ಲಿ ಮಾಲ್ವೇರ್ ಇನ್ಸ್ಟಾಲ್ ಆಗಬಹುದು. ಅಲ್ಲದೆ, ಎಲ್ಲ ರೀತಿಯ ಮಾಹಿತಿಗಳನ್ನೂ ದಾಳಿಕೋರರು ಸಂಗ್ರಹಿಸಬಹುದು ಎಂದು ಸಿಇಆರ್ಟಿ-ಇನ್ ಜೂನ್ 19ರ ಮಾರ್ಗಸೂಚಿಯಲ್ಲಿ ಎಚ್ಚರಿಕೆ ನೀಡಿದೆ.
ದಾಳಿಕೋರರು 20 ಲಕ್ಷ ನಾಗರಿಕರ ಇ-ಮೇಲ್ಗೂ ಇಂತಹ ಮೇಲ್ ಕಳುಹಿಸಬಹುದು. ಸಬ್ಜೆಕ್ಟ್ ಲೈನ್ನಲ್ಲಿ ಫ್ರೀ ಕೋವಿಡ್ 19 ಟೆಸ್ಟಿಂಗ್ ಫಾರ್ ಆಲ್ ರೆಸಿಡೆಂಟ್ಸ್ ಆಫ್ ದೆಹಲಿ/ಮುಂಬೈ/ಹೈದರಾಬಾದ್/ಚೆನ್ನೈ ಇತ್ಯಾದಿ ಇರಬಹುದು. ಈ ರೀತಿಯ ಮೇಲ್ ಬಂದರೆ ಅವುಗಳನ್ನು ತೆರೆಯಬೇಡಿ ಎಂದು ಸಿಇಆರ್ಟಿ ಇನ್ ಸಾರ್ವಜನಿಕರನ್ನೂ ಎಚ್ಚರಿಸಿದೆ. (ಏಜೆನ್ಸೀಸ್)