ತುಪ್ಪದ ಗುಣಮಟ್ಟ ಪರೀಕ್ಷೆಗೆ ಮುಂದಾದ ಸರ್ಕಾರ

dinesh
Published on

ಬೆಂಗಳೂರು: ತಿರುಪತಿ ಲಡ್ಡುನಲ್ಲಿ ಪ್ರಾಣಿಜನ್ಯ ಕೊಬ್ಬಿನ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಉಪಕ್ರಮ ಕೈಗೊಳ್ಳುತ್ತಿದೆ.

ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಪ್ರಸಾದ ತಯಾರಿಕೆಗೆ ನಂದಿನಿ ತುಪ್ಪವನ್ನೇ ಬಳಸುವಂತೆ ಈಗಾಗಲೇ ಸ್ಪಷ್ಟ ಸೂಚನೆ ನೀಡಿದೆ.

ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ರಾಜ್ಯದಲ್ಲಿ ಉತ್ಪತ್ತಿ/ಮಾರಾಟವಾಗುವ ತುಪ್ಪಗಳ ಗುಣಮಟ್ಟ ಪರಿಶೀಲನೆಗೆ ಮುಂದಾಗಿದೆ. ಈ ಬಗ್ಗೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ತುಪ್ಪದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸುವಂತೆ ಸೂಚನೆ ನೀಡಲಾಗಿದೆ. ನಂದಿನಿ ಹೊರತುಪಡಿಸಿ ಉಳಿದ ತುಪ್ಪದ ಸ್ಯಾಂಪಲ್‌ಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ. ತುಪ್ಪದ ಗುಣಮಟ್ಟ ಕಾಪಾಡಲು ಈ ಕ್ರಮಕೈಗೊಳ್ಳಲಾಗಿದೆ. ಪ್ರಸಾದಗಳ ಸ್ಯಾಂಪಲ್ ಪರಿಶೀಲನೆ ಅಲ್ಲ, ನೇರವಾಗಿ ತುಪ್ಪದ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಆಹಾರ ಸುರಕ್ಷತಾ ಆಯುಕ್ತರಿಗೆ ಸೂಚನೆ

ಆಹಾರ ಸುರಕ್ಷತಾ ಆಯುಕ್ತರಿಗೆ ಈ ಬಗ್ಗೆ ಹೇಳಿದ್ದೇನೆ. ರಾಜ್ಯದಲ್ಲಿ ಬಳಸುತ್ತಿರುವ ತುಪ್ಪದ ಬಗ್ಗೆ ತಪಾಸಣೆ ಮಾಡಲು ಸೂಚನೆ ನೀಡಿದ್ದೇನೆ. ಈಗಾಗಲೇ ಸ್ಯಾಂಪಲ್ ಸಂಗ್ರಹಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು.

ತಿರುಪತಿಯಲ್ಲಿ ಆದ ರೀತಿ ಕೊಬ್ಬಿನ ಅಂಶಗಳು ಇಲ್ಲಿ ಬಳಕೆಯಾಗುತ್ತಿರುವ ತುಪ್ಪದಲ್ಲಿ ಇದೆಯೇ ಎಂದು ನೋಡುತ್ತಿದ್ದೇವೆ. ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ತುಪ್ಪ ಬರುತ್ತದೆ. ಎಲ್ಲ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರಿಶೀಲಿಸಲು ಹೇಳಿದ್ದೇನೆ ಎಂದು ತಿಳಿಸಿದರು.

ರಾಜ್ಯದಲ್ಲೂ ಗಂಭೀರ ಪರಿಗಣನೆ

ಆಂಧ್ರ ಮುಖ್ಯಮಂತ್ರಿ ತುಪ್ಪದಲ್ಲಿ ಬೇರೆ ಬೇರೆ ಕೊಬ್ಬಿನಾಂಶ ಇತ್ತು ಎಂದು ಹೇಳಿರುವುದು ಆತಂಕಕಾರಿಯಾದ ವಿಚಾರವಾಗಿದೆ. ಒಬ್ಬ ಸಿಎಂ ಹೇಳಿದ ಮೇಲೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ದೇವರ ಬಗ್ಗೆ ಶ್ರದ್ಧೆ ಇರುವವರಿಗೆ ಈ ವಿಚಾರ ಬಹಳ ಆಘಾತಕಾರಿಯಾಗಿದೆ. ಹೀಗಾಗಿ ರಾಜ್ಯದಲ್ಲಿ ಪರಿಶೀಲನೆ ಮಾಡಿ ಎಂದು ಹೇಳಿದ್ದೇವೆ. ವರದಿಯಲ್ಲಿ ಏನು ಬರುತ್ತೆ ಎಂದು ತಿಳಿದುಕೊಳ್ಳೋಣ. ಯಾಕೆಂದರೆ ಜನರಿಗೆ ಈ ವಿಚಾರದಲ್ಲಿ ಬಹಳ ಗೊಂದಲ ಶುರುವಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಯಾರನ್ನು ನಂಬಬೇಕು ಎನ್ನುವುದೇ ಪ್ರಶ್ನೆ

ತಿರುಪತಿ ಲಡ್ಡು ವಿಚಾರದಲ್ಲಿ ಈ ರೀತಿ ಇದೆ ಅಂತ ಆದಾಗ ಯಾರನ್ನು ನಂಬಬೇಕು ಎನ್ನುವ ಪ್ರಶ್ನೆ ಎದುರಾಗಿದೆ. ನಾಳೆ ಪ್ರಸಾದವನ್ನು ಸ್ವೀಕರಿಸದೆ ಇರುವಂತಹ ಪರಿಸ್ಥಿತಿ ಹೋಗಬಹುದು. ಹಾಗಾಗಿ ನಮ್ಮ ಕಡೆಯಿಂದ ಪರಿಶೀಲನೆ ಮಾಡಿಸುತ್ತಿದ್ದೇವೆ. ಮೊದಲು ವರದಿ ಬರಲಿ ಬಳಿಕ ಮುಂದಿನ ಕ್ರಮ ತೀರ್ಮಾನ ಮಾಡ್ತೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net