Manmohan Singh ಸ್ಮಾರಕಕ್ಕೆ ಜಾಗ ನೀಡಲು ಒಪ್ಪಿದ ಕೇಂದ್ರ ಸರ್ಕಾರ; ತಾರ್ಕಿಕ ಅಂತ್ಯ ಕಂಡ ಬಿಜೆಪಿ-ಕಾಂಗ್ರೆಸ್​ ಜಟಾಪಟಿ

Manmohan Singh
Published on

ನವದೆಹಲಿ: ಭಾರತದ 14ನೇ ಪ್ರಧಾನ ಮಂತ್ರಿಯಾಗಿದ್ದ ಡಾ. ಮನಮೋಹನ್ ಸಿಂಗ್ (Manmohan Singh) ದೇಶ ಕಂಡ ಅಪ್ರತಿಮ ಅರ್ಥಶಾಸ್ತ್ರಜ್ಞರಾಗಿದ್ದರು. ಎರಡು ಬಾರಿ ಪ್ರಧಾನಿಯಾಗಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ ಖ್ಯಾತಿ ಹೊಂದಿರುವ ಮನಮೋಹನ್​ ಸಿಂಗ್ ಅವರ ನಿಧನಕ್ಕೆ ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ (Manmohan Singh) ಅವರ ಅಂತ್ಯಸಂಸ್ಕಾರವು ಸೇನಾ ಗೌರವಗಳೊಂದಿಗೆ ನವದೆಹಲಿಯ ನಿಗಮಬೋಧ ಘಾಟ್‌ನಲ್ಲಿ ನಡೆಯಲಿದ್ದು, ಈಗಾಗಲೇ ತಯಾರಿ ಆರಂಭಿಸಲಾಗಿದೆ. ಮನಮೋಹನ್​ ಸಿಂಗ್​ ಅವರ ಪಾರ್ಥೀವ ಶರೀರ ತೆರಳಲಿರುವ ರಸ್ತೆಗಳಲ್ಲಿ ಪೊಲೀಸರು ಈಗಾಗಲೇ ಬಿಗಿ ಬಂದೋಬಸ್ತ್​ ಮಾಡಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ.

ಇನ್ನೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ (Manmohan Singh) ಅವರ ಸ್ಮಾರಕಕ್ಕೆ ಜಾಗ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವರಿಗೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದರು. ಈ ಸಂಬಂಧ ಸಭೆ ನಡೆಸಿದ್ದ ಗೃಹ ಸಚಿವಾಲಯವು ಸ್ಮಾರಕಕ್ಕೆ ಜಾಗ ಮಂಜೂರು ಮಾಡುವುದಾಗಿ ತಿಳಿಸಿದ್ದು, ಮಲ್ಲಿಕಾರ್ಜುನ ಖರ್ಗೆ ಹಾಗೂ ಮನಮೋಹನ್​ ಸಿಂಗ್​ ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದೆ.  ಸ್ಮಾರಕ ನಿರ್ಮಾಣ ಸಂಬಂಧ ಟ್ರಸ್ಟ್​ ರಚಿಸಬೇಕಾಗಿದ್ದು, ಜಾಗವನ್ನು ಗುರುತಿಸಬೇಕಿದೆ. ಶೀಘ್ರದಲ್ಲೇ ಈ ಕಾರ್ಯವನ್ನು ಕೈಗೆತ್ತಿಕೊಳ್ಳುವುದಾಗಿ ಗೃಹ ಇಲಾಖೆಯೂ ತಿಳಿಸಿದೆ.

ದೀರ್ಘಕಾಲದಿಂದ ಅನಾರೋಗ್ಯಕ್ಕೀಡಾಗಿದ್ದ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರು ಡಿಸೆಂಬರ್​​ 26ರ ರಾತ್ರಿ 9:51ಕ್ಕೆ ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ  ಕೊನೆಯುಸಿರೆಳೆದರು. ಮನಮೋಹನ್ ಸಿಂಗ್ ಅವರು ಪತ್ನಿ ಗುರುಶರಣ್ ಕೌರ್ ಮತ್ತು  ಮೂವರು ಪುತ್ರಿಯರನ್ನು ಅಗಲಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net