

ಬೆಂಗಳೂರು:
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅವರ ವಿಷಯದಲ್ಲಿ ಬೈಲಾ ರೀತಿಯಲ್ಲಿ ಕ್ರಮ ಕೈಗೊಂಡು ವರದಿ ಮಾಡುವಂತೆ ಸಹಕಾರ ಸಂಘಗಳ ಉಪನಿಬಂಧಕರ ಜಿಲ್ಲಾ ನೋಂದಣಾಧಿಕಾರಿಗಳು, ನೌಕರರ ಸಂಘದ ಕಾರ್ಯದರ್ಶಿಗೆ ನೋಟೀಸ್ ಜಾರಿ ಮಾಡಿದ್ದಾರೆಯೇ ಹೊರತು ಅಮಾನತ್ತು ಆದೇಶ ಹೊರಡಿಸಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಸ್ಪಷ್ಟಪಡಿಸಿದೆ.
ಯಾರೇ ದೂರು ನೀಡಿದರೂ, ಅದಕ್ಕೆ ಸಂಬಂದಿಸಿದಂತೆ ಇಲಾಖಾಧಿಕಾರಿಗಳು ಪತ್ರ ಬರೆಯುವುದು ಸರ್ವೆ ಸಾಮಾನ್ಯ. ರಾಜ್ಯ ಪರಿಷತ್ ಸದಸ್ಯರೊಬ್ಬರ ದೂರಿನ ಹಿನ್ನೆಲೆಯಲ್ಲಿ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಈ ಬಗ್ಗೆ ನಮಗೆ ಪತ್ರ ಬರೆದಿದ್ದಾರೆ. ಆದರೆ ಇದು ಆದೇಶವಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ತಿಳಿಸಿದ್ದಾರೆ.
ಸಂಘದ ಅಧ್ಯಕ್ಷರಾದ ಷಡಾಕ್ಷರಿ ಅವರ ವರ್ಗಾವಣೆ ವಿಷಯ ಕೆಎಟಿ ನ್ಯಾಯಾಲಯದಲ್ಲಿದೆ. ಹಾಗಾಗಿ ಹೆಚ್ಚಿನ ವಿಷಯಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಸಹಕಾರ ಸಂಘದ ನೋಂದಣಾಧಿಕಾರಿಗಳ ಪತ್ರಕ್ಕೆ ಉತ್ತರ ನೀಡಲಾಗುವುದು ಎಂದಿದ್ದಾರೆ.