ಅಯೋಧ್ಯೆ ವಿಚಾರ ಗಮನಿಸುವುದಕ್ಕೆ ಪ್ರತ್ಯೇಕ ವಿಭಾಗ ರಚಿಸಿದ ಕೇಂದ್ರ ಸರ್ಕಾರ

Ayodhya vvani
Published on

ನವದೆಹಲಿ: ಅಯೋಧ್ಯೆಗೆ ಸಂಬಂಧಿಸಿದ ವಿಚಾರಗಳನ್ನು ಗಮನಿಸುವುದಕ್ಕಾಗಿ ಪ್ರತ್ಯೇಕ ವಿಭಾಗವನ್ನು ಕೇಂದ್ರ ಸರ್ಕಾರ ಸ್ಥಾಪಿಸಿದ್ದು, ಹೆಚ್ಚುವರಿ ಕಾರ್ಯದರ್ಶಿ ಒಬ್ಬರು ಅದರ ಮುಖ್ಯಸ್ಥರಾಗಿರುತ್ತಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ಅದು, ಅಯೋಧ್ಯೆಗೆ ಸಂಬಂಧಿಸಿದ ವಿಚಾರಗಳು ಮತ್ತು ಕೋರ್ಟ್ ತೀರ್ಪಿಗೆ ಸಂಬಂಧಿಸಿದ ವಿಷಯಗಳನ್ನು ಅನುಸರಣೆ ಮಾಡುವ ನಿಟ್ಟಿನಲ್ಲಿ ಈ ವಿಭಾಗ ಕೆಲಸ ಮಾಡಲಿದೆ. ಅಡಿಷನಲ್ ಸೆಕ್ರಟರಿ ಗ್ಯಾನೇಶ್ ಕುಮಾರ್​ ನೇತೃತ್ವದಲ್ಲಿ ಮೂವರು ಅಧಿಕಾರಿಗಳು ಇಲ್ಲಿ ಇರಲಿದ್ದಾರೆ ಎಂದು ಹೇಳಿದೆ. ಆಸಕ್ತಿದಾಯಕ ಅಂಶ ಎಂದರೆ, ಗ್ಯಾನೇಶ್ ಕುಮಾರ್ ಕೇಂದ್ರ ಗೃಹ ಸಚಿವಾಲಯದಲ್ಲಿ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ವ್ಯವಹಾರಗಳನ್ನೂ ಗಮನಿಸುತ್ತಿದ್ದಾರೆ.

ಸುಪ್ರೀಂ ಕೋರ್ಟ್ ನವೆಂಬರ್ 9ರಂದು ನೀಡಿರುವ ತೀರ್ಪಿನ ನಂತರದ ಮಹತ್ವದ ಬೆಳವಣಿಗೆ ಇದಾಗಿದೆ. ಸುಪ್ರೀಂ ತೀರ್ಪಿನ ಪ್ರಕಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಸಿಕ್ಕಿದೆ. ಅದೇ ರೀತಿ ಮಸೀದಿ ನಿರ್ಮಾಣಕ್ಕೆ ಐದು ಎಕರೆ ಜಮೀನು ಕೊಡಬೇಕು ಎಂಬ ಆದೇಶವೂ ಆಗಿದೆ. ಉತ್ತರ ಪ್ರದೇಶ ಸರ್ಕಾರ ಈ ನಿಟ್ಟಿನಲ್ಲಿ ಮೂರು ಪ್ಲಾಟ್​ಗಳನ್ನು ಗುರುತಿಸಿದ್ದು, ಪ್ರಸ್ತಾವನೆಯನ್ನು ಸಿದ್ಧಪಡಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಿದೆ ಎಂದೂ ವರದಿಯಾಗಿದೆ.ಈ ಎಲ್ಲ ವಿಚಾರಗಳನ್ನೂ ಇನ್ನು ಈ ವಿಭಾಗ ನೋಡಿಕೊಳ್ಳಲಿದೆ.

ಅಯೋಧ್ಯೆಗೆ ಸಂಬಂಧಿಸಿ ಇಂಥ ಘಟಕ ರಚಿಸಿರುವುದು ಇದೇ ಮೊದಲಲ್ಲ. ಅಯೋಧ್ಯೆಗೆ ಸಂಬಂಧಿಸಿದ ಲಿಬರ್​ಹಾನ್ ಆಯೋಗ ವರದಿ ಸಲ್ಲಿಸಿದ ಸಂದರ್ಭದಲ್ಲಿ 1990ರ ದಶಕದಲ್ಲಿ ಮತ್ತು 2000ದ ಆರಂಭದಲ್ಲಿ ಇಂಥ ಘಟಕ ಇತ್ತು.

ಇದೇ ಆದೇಶದ ಇನ್ನೊಂದು ಅಂಶದಲ್ಲಿ, ಆಂತರಿಕ ಸುರಕ್ಷೆಯ ಎರಡನೇ ಡಿವಿಷನ್​ ಒಂದನೇ ಡಿವಿಷನ್​ ಜತೆಗೆ ವಿಲೀನವಾಗಲಿದೆ. ಇನ್ನು ಮುಂದೆ ಅದು ಇಂಟರ್ನಲ್​ ಸೆಕ್ಯುರಿಟಿ-I ಡಿವಿಷನ್ ಎಂದು ಗುರುತಿಸಿಕೊಳ್ಳಲಿದೆ. ಜಾಯಿಂಟ್ ಸೆಕ್ರಟರಿ(ವುಮೆನ್ ಸೇಫ್ಟಿ) ಪುಣ್ಯ ಸಲಿಲಾ ಶ್ರೀವಾಸ್ತವ ಈ ವಿಭಾಗದ ಮುಖ್ಯಸ್ಥರಾಗಿ ಇರಲಿದ್ದಾರೆ ಎಂದು ಹೇಳಿದೆ. (ಏಜೆನ್ಸೀಸ್​) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net