

ಬೆಂಗಳೂರು ಗ್ರಾಮಾಂತರ : ಕರೊನಾ ಸಂಕಷ್ಟದ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸರ್ಕಾರ ಕಾರ್ಮಿಕರ ನೆರವಿಗೆ ನಿಂತಿದ್ದು, ಕಾರ್ಮಿಕರು ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಸರ್ಕಾರಿ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ಸಂದೀಪ್ ಸಾಲಿಯಾನ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗ್ರಾಮಾಂತರ ಜಿಲ್ಲಾ ಕಾರ್ಮಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರಿಗೆ ಆಹಾರ ಮತ್ತು ಸುರಕ್ಷತಾ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಶೇ.40 ಅಸಂಘಟಿತ ವಲಯದ ಕಾರ್ಮಿಕರಿದ್ದು, ಅವರ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿದೆ ಎಂದರು.
ಕೆಲಸ ನಿರ್ವಹಿಸುವಾಗ ಕಾರ್ಮಿಕರು ಮಾದಕ ವಸ್ತುಗಳನ್ನು ಸೇವಿಸಿ ಅನಾಹುತ ಸಂಭವಿಸಿದರೆ ಸರ್ಕಾರದಿಂದ ಯಾವುದೇ ನೆರವು ದೊರೆಯುವುದಿಲ್ಲ, ಆದ್ದರಿಂದ ಎಲ್ಲರೂ ಉತ್ತಮ ಮನಸ್ಥಿತಿ, ಆರೋಗ್ಯ ಮತ್ತು ಸುರಕ್ಷತೆಯಿಂದಿರಬೇಕು ಎಂದು ತಿಳಿಸಿದರು.
1700 ಕಾರ್ಮಿಕರ ನೋಂದಣಿ:ವಿಮಾನ ನಿಲ್ದಾಣ ಅಭಿವೃದ್ಧಿ ಕಾಮಗಾರಿಗಳಲ್ಲಿ 7 ಸಾವಿರ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಈಗಾಗಲೇ 1700 ಕ್ಕೂ ಹೆಚ್ಚು ಜನರ ನೋಂದಣಿ ಹಾಗೂ ಆಧಾರ್ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಕಟ್ಟಡ ಕಾರ್ಮಿಕರು ಸೇರಿ ಅಸಂಘಟಿತ ವಲಯದ ಕಾರ್ಮಿಕರ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿದ್ದು, ಹಣಕಾಸಿನ ನೆರವು ಸೇರಿ ಹಲವು ಸೇವೆ ನೀಡಲಾಗುತ್ತಿದೆ ಕಾರ್ಮಿಕರು ನೋಂದಣಿ ಮಾಡಿಸಿ ಜತೆಯಲ್ಲಿರುವ ಕಾರ್ಮಿಕರಿಗೂ ನೋಂದಣಿ ಮಾಡಿಸಲು ತಿಳಿಸಿ ಎಂದು ಸಲಹೆ ನೀಡಿದರು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಸರ್ಕಾರ ಅಸಂಘಟಿತ ವಲಯಕ್ಕೆ 2 ಸಾವಿರ ರೂ.ಸಹಾಯಧನ ಘೋಷಿಸಿದ್ದು, ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ತಿಳಿಸಿದರು.
ಅಪರ ಕಾರ್ಮಿಕ ಆಯುಕ್ತ ನರಸಿಂಹಮೂರ್ತಿ ಮಾತನಾಡಿ, ವಿಶ್ವವೇ ಕೋವಿಡ್ ಸಾಂಕ್ರಾಮಿಕ ರೋಗದಿಂದ ಈಗಷ್ಟೇ ಚೇತರಿಸಿಕೊಳ್ಳತ್ತಿದ್ದು, ನ್ಯಾಯಾಲಯಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಆದೇಶಗಳನ್ನು, ಮಾರ್ಗಸೂಚಿ ಹೊರಡಿಸಿ, 25 ವರ್ಗದ ಕಾರ್ಮಿಕರಿಗೆ 3 ಸಾವಿರ ರೂ. ಆರ್ಥಿಕ ನೆರವು ನೀಡುವ ಮೂಲಕ ಕಾರ್ಮಿಕರ ಪರವಾಗಿ ನಿಂತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಈಗಾಗಲೇ 22 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದು, ನೋಂದಣಿಯಾಗಿರುವ ಎಲ್ಲ ಕಾರ್ಮಿಕರಿಗೂ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಸಹಾಯಧನವನ್ನು ಜಮಾ ಮಾಡಲಾಗುತ್ತಿದೆ ಎಂದು ತಿಳಿಸಿದರು.