

ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರ ಪ್ರಮಾಣ ದ್ವಿಗುಣವಾಗುವ ಕಾಲಾವಧಿಯಲ್ಲಿ ಏರಿಕೆಯಾಗಿದೆ. ಅಂದರೆ, ಈ ಮೊದಲು 3.4 ದಿನಗಳಲ್ಲಿ ಎರಡು ಪಟ್ಟು ಹೆಚ್ಚಾಗುತ್ತಿದುದು ಈಗ 7.5 ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಕೇಂದ್ರ ಕುಟುಂಬ ಮತ್ತು ಆರೋಗ್ಯ ಇಲಾಖೆ ಹೇಳಿದೆ.
ದೇಶಾದ್ಯಂತ ವಿಧಿಸಲಾಗಿರುವ ಲಾಕ್ಡೌನ್ ನಿರ್ಬಂಧಗಳನ್ನು ಮೇ 3ರ ನಂತರ ಹಂತಹಂತವಾಗಿ ಸಡಿಲಗೊಳಿಸಲು ಕೇಂದ್ರ ಸರ್ಕಾರ ಮಾರ್ಗೋಪಾಯಗಳನ್ನು ಹುಡುಕುತ್ತಿದೆ. ಆ ವೇಳೆಗೆ ಸೋಂಕಿತರ ಪ್ರಮಾಣ ದ್ವಿಗುಣಗೊಳ್ಳುವ ಅವಧಿ 12 ದಿನಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷೆ ಹೊಂದಲಾಗಿದೆ.
ಇದರ ನಡುವೆ, ಮೇ ಅಂತ್ಯಕ್ಕೆ ಅಥವಾ ಜೂನ್ ಆರಂಭದಲ್ಲಿ ಕರೊನಾ ಸೋಂಕಿನ ಎರಡನೇ ಅಲೆ ಅಥವಾ ಹಂತ ಆರರಂಭವಾಗಲಿದೆ. ಇದಕ್ಕಾಗಿಯೂ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಲಾಕ್ಡೌನ್ ನಿರ್ಬಂಧಗಳನ್ನು ಒಂದೇ ಬಾರಿಗೆ ತೆರವುಗೊಳಿಸಲು ಸಾಧ್ಯವಿಲ್ಲ ಎಂಬುದಂತೂ ಗೊತ್ತಿರುವ ಸಂಗತಿ. ಹೀಗಾಗಿ ಹಂತಹಂತವಾಗಿ ಕೆಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತದೆ. ಇದು ಶುರುವಾಗುತ್ತಿದ್ದಂತೆ ಕರೊನಾ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬರಲಿದೆ. ಮೇ ಅಂತ್ಯ ಅಥವಾ ಜೂನ್ ವೇಳೆಗೆ ಎರಡನೇ ಹಂತದ ಕರೊನಾ ಅಲೆ ಕಾಣಿಸಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರೊನಾ ವಿಚಾರವಾಗಿ ಜನರು ಈಗಾಗಲೇ ಜಾಗೃತರಾಗಿದ್ದಾರೆ. ಸಾಮಾಜಿಕ ಅಂತರದ ಮಹತ್ವ ಅರಿತಿದ್ದಾರೆ. ಮಾಸ್ಕ್ ಧರಿಸುತ್ತಿದ್ದಾರೆ. ಹೀಗಾಗಿ ರೋಗಿಗಳ ಸಂಖ್ಯೆಯಲ್ಲಿ ದ್ವಿಗುಣವಾಗುವ ಕಾಲಾವಧಿ 5 ದಿನಗಳಿಗಿಂತ ಕಡಿಮೆ ಆಗಲಾರದು ಎಂಬ ಲೆಕ್ಕಾಚಾರ ಹಾಕಲಾಗಿದೆ.
ನಗರ ಹಾಗೂ ಅರೆನಗರ ಪಟ್ಟಣಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಕರೊನಾ ನಿಯತ್ರಣ ಹೆಚ್ಚು ಸವಾಲಾಗಿದೆ. ದೆಹಲಿ, ಮುಂಬೈ ಹಾಗೂ ಚಂಡಿಗಢ್ನ ವಿದ್ಯಮಾನಗಳು ಈ ಯುದ್ಧದಲ್ಲಿ ಹಲವು ಅನಿರೀಕ್ಷಿತಗಳು ಎದುರಾಗಬಹುದು ಎಂಬುದನ್ನು ತಿಳಿಸಿವೆ.
ಕರೊನಾ ಪ್ರಕರಣಗಳ ಹೆಚ್ಚಳ ಹಾಗೂ ಕಡಿಮೆಯಾದ ಆಧಾರದಲ್ಲಿ ಪ್ರದೇಶವಾರು ಲಾಕ್ಡೌನ್ ಹಾಗೂ ನಿಯಮಗಳ ಸಡಿಲಿಕೆಯು ಕನಿಷ್ಠ ಸೆಪ್ಟೆಂಬರ್ ಮುಂದುವರಿಯಲಿದೆ. ಆದರೆ, ಎರಡನೇ ಹಂತದಲ್ಲಿ ಮೊದಲಿನಷ್ಟು ವೇಗವಾಗಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುವುದಿಲ್ಲ. ಜತೆಗೆ ಈಗಾಗಲೇ ಅಗತ್ಯ ಆಸ್ಪತ್ರೆ, ಟೆಸ್ಟಿಂಗ್ ಕಿಟ್ ಹಾಗೂ ವಿವಿಧ ವೈದ್ಯಕೀಯ ಅಗತ್ಯಗಳು ಎರಡನೇ ಹಂತದಲ್ಲಿ ಸಮಸ್ಯೆಯಾಗುವುದಿಲ್ಲ ಎಂಬ ವಿಶ್ವಾಸ ಅಧಿಕಾರಿಗಳದ್ದಾಗಿದೆ.