ವಿಡಿಯೋ ಕಾನ್ಫರೆನ್ಸಿಂಗ್​ ಮೇಲೆ ಏನಿದು 'ಝೂಮ್​ ಬಾಂಬಿಂಗ್​' ? ಚೀನಿ ಆ್ಯಪ್​ ಜನಪ್ರಿಯತೆ ಏರಿದ್ದೇಕೆ?

Zoom App2
Published on

ನವದೆಹಲಿ: ಲಾಕ್​ಡೌನ್​ ಸಮಯದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್​ ಆ್ಯಪ್​ಗಳು ಜನರಿಗೆ ಒಂದು ರೀತಿಯಲ್ಲಿ ವರದಾನವಾಗಿ ಪರಿಗಣಿಸಿವೆ. ಮನೆಯಿಂದ ಹೊರಹೋಗಲಾಗದ ಸಂದರ್ಭದಲ್ಲಿ ಬಾಂಧವ್ಯ ಬೆಸೆಯುವ ಸಾಧನಗಳಾಗಿವೆ. ಶುಭ ಕಾರ್ಯಗಳಿಗೆ ಸಾಕ್ಷಿಯಾದವು. ಮದುವೆ, ನಾಮಕರಣಗಳೂ ಇದರ ಮೂಲಕ ನಡೆದಿವೆ.

ಇನ್ನೂ ಶೈಕ್ಷಣಿಕ ಹಾಗೂ ಕಾರ್ಪೋರೇಟ್​ ವಲಯದಲ್ಲಿ ಇವುಗಳ ಕೊಡುಗೆ ಅಪಾರ. ಕೆಲ ಸಂಸ್ಥೆಗಳು ತಮ್ಮದೇ ಆದ ಆ್ಯಪ್​ಗಳನ್ನು ಅಭಿವೃದ್ಧಿಸಿಕೊಂಡಿದ್ದರೂ, ಹೆಚ್ಚಿನ ಸಂಸ್ಥೆಗಳು ಬಳಕೆಗೆ ಉಚಿತವಾಗಿದ್ದ ಆ್ಯಪ್​ಗಳನ್ನೇ ಅವಲಂಬಿಸಿದ್ದವು.

ಇನ್ನು, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಆನ್​ಲೈನ್​ ಪಾಠ ಮಾಡುವಂತೆ ಬೋಧಕರಿಗೆ ದುಂಬಾಲು ಬಿದ್ದವು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೊಬೈಲ್​ಗಳಲ್ಲಿ ವಿಡಿಯೋ ಆ್ಯಪ್​ಗಳು ಸ್ಥಾನ ಪಡೆದುಕೊಂಡವು. ಹೀಗೆ ಜನಪ್ರಿಯತೆಗೆ ಬಂದಿದ್ದೇ ಚೀನಾ ನಿರ್ಮಿತ ಝೂಮ್​ ಆ್ಯಪ್​.

ಇದರಂತೆ ಹೌಸ್​ ಪಾರ್ಟಿ, ಗೂಗಲ್​ನ ಹ್ಯಾಂಗ್​ಔಟ್​, ವೆಬೆಕ್ಸ್​, ಮೈಕ್ರೋಸಾಫ್ಟ್​ನ ಟೀಮ್ಸ್​, ಬ್ಲ್ಯೂಜೀನ್ಸ್​ ಮೊದಲಾದ ವಿಡಿಯೋ ಆ್ಯಪ್​ಗಳ ಬಳಕೆ ಹಾಗೂ ಮೌಲ್ಯ ಏಕಾಏಕಿ ಹೆಚ್ಚಾಯಿತು.

ಹೌಸ್​ ಪಾರ್ಟಿ ಆ್ಯಪ್​ ಮೂಲಕ ಸ್ಮಾರ್ಟ್​ಪೋನಲ್ಲಿರುವ ಮಾಹಿತಿಗಳನ್ನು ಕದಿಯಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಜನರು ಇದನ್ನು ಫೋನ್​ಗಳಿಂದ ಅನ್​ಇನ್​ಸ್ಟಾಲ್​ ಮಾಡಲಾರಂಭಿಸಿದರು. ಇದು ಸುಳ್ಳು ಎಂದ ಹೇಳಿದರೂ ಜನ ನಂಬಲಿಲ್ಲ.

ಲಾಕ್​ಡೌನ್​ ಸಮಯದಲ್ಲಿ ಝೂಮ್​ ಆ್ಯಪ್​ ಬಳಕೆದಾರರ ಸಂಖ್ಯೆ ದಿನಕ್ಕೆ ಒಂದು ಕೋಟಿಯಿಂದ 20 ಕೋಟಿಗೆ ಏರಿಕೆಯಾಯಿತು. ಇದಕ್ಕೆ ಕಾರಣವೇನೆಂದು ಹುಡುಕುವುದಾದರೆ, ವಹಿವಾಟು ಕೇಂದ್ರೀತವಾಗಿದ್ದ ವಿಡಿಯೋ ಕಾನ್ಫರೆನ್ಸಿಂಗ್​ನ್ನು ಜಾಗತಿಕವಾಗಿ ವಿಡಿಯೋ ಸಂಭಾಷಣೆ ಸಾಧನವಾಗಿ ಪರಿವರ್ತಿಸಿದ್ದು ಝೂಮ್​ ಆ್ಯಪ್​. ಇದರಿಂದಾಗಿ ಅಪರಿಚಿತರೊಂದಿಗೂ ನೀವು ವಿಡಿಯೋ ಸಂಭಾಷಣೆ ನಡೆಸಬಹುದು. ಈ ಸೌಲಭ್ಯವೇ ಇದಕ್ಕೆ ಮುಳುವಾಯ್ತು. ಬಹುದೊಡ್ಡ ಸಮಸ್ಯೆಯಾಗಿ ಪರಿವರ್ತನೆಯಾಯ್ತು.

ಕೋಡಿಂಗ್​ಗಳಲ್ಲಿ ವೈರಸ್​ಗಳು ಪತ್ತೆಯಾದವು, ಫೇಸ್​ಬುಕ್​ನೊಂದಿಗೆ ಮಾಹಿತಿ ಹಂಚಿಕೊಂಡಿದ್ದು ಬೆಳಕಿಗೆ ಬಂತು ಹಾಗೂ ಬಳಕೆದಾರರ ಪಾಸ್​ವರ್ಡ್​ಗಳು ಸೋರಿಕೆಯಾದವು, ಬಳಕೆ ಸಮಯದಲ್ಲಿ ಹ್ಯಾಕ್​ ಮಾಡಲಾಗುತ್ತಿರುವುದು ಗಮನಕ್ಕೆ ಬಂದಾಗ ಹುಟ್ಟಿಕೊಂಡ ಪದವೇ 'ಝೂಮ್​ ಬಾಂಬಿಂಗ್​'- ಅಂದರೆ ಆಮಂತ್ರಿತರಲ್ಲದವರೂ ನಿಮ್ಮೊಂದಿಗೆ ವಿಡಿಯೋ ಸಂಭಾಷಣೆಗೆ ಇಳಿಯುವುದು. ಈ ಎಲ್ಲ ಕಾರಣಗಳಿಂದಾಗಿ ಸರ್ಕಾರ ಈ ವಿಡಿಯೋ ಆ್ಯಪ್​ ಬಳಸುವುದು ಬೇಡ ಎಂದಿತು.

ಪ್ರಸ್ತುತ ಇದರಲ್ಲಿ ಉಂಟಾಗಿದ್ದ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂಬುದು ಕಂಪನಿಯ ವಾದ. ಆದರೆ, 'ಝೂಮ್​ ಬಾಂಬಿಂಗ್​'ಗೆ ತಡೆ ಬಿದ್ದಿದೇಯಾ ಎಂಬುದನ್ನು ಬಳಕೆದಾರರೇ ಹೇಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net