

ಬೆಂಗಳೂರು: ಮಳೆ ಅಭಾವದಿಂದ ಬೆಳೆ ನಷ್ಟ, ವಿದ್ಯುತ್ ಲೋಡ್‌ಶೆಡ್ಡಿಂಗ್‌ನಿಂದ ರೈತರು ಕಂಗೆಟ್ಟಿದ್ದಾರೆ. ಕೂಡಲೇ ಪರಿಹಾರಧನ ನೀಡದಿದ್ದರೆ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಧರಣಿ ಹೂಡಬೇಕಾಗುತ್ತದೆ ಎಂದು ಬಿಜೆಪಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 11.18 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಈವರೆಗೂ ರೈತರಿಗೆ ಬಿಡಿಗಾಸು ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸಿ ಕಾಲತಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಆಡಳಿತಾವಧಿಯಲ್ಲಿ ಕೇಂದ್ರ ಸರ್ಕಾರದ ನೆರವಿಗಾಗಿ ಕಾಯದೆ ಪ್ರವಾಹ, ಅತಿವೃಷ್ಟಿಬಾಧಿತ 39 ಲಕ್ಷ ಹೆಕ್ಟೇರ್ ಪ್ರದೇಶದ ವಿವಿಧ ಬೆಳೆಗಳಿಗೆ ದುಪ್ಪಟ್ಟು ಪರಿಹಾರಧನ ನೀಡಲಾಗಿತ್ತು ಎಂದು ನೆನಪಿಸಿದರು.
ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ, ಇನ್ನೂ ಹಣ ಬಂದಿಲ್ಲವೆಂದು ಹೇಳುವುದಾದರೆ ರಾಜ್ಯ ಸರ್ಕಾರಕ್ಕೆ ರೈತರು ಸಂಬಂಧವಿಲ್ಲವೆ ?, ಗ್ಯಾರಂಟಿ ಯೋಜನೆಗಳ ಜಾರಿಯಷ್ಟೇ ಸರ್ಕಾರದ ಜವಾಬ್ದಾರಿಯೆ ? ಎಂದು ಕೇಳಿದರು.
ಯಾವ ಸಚಿವ, ಶಾಸಕರು ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ಬೆಳೆಗಳ ಸ್ಥಿತಿಗತಿ ಪರಿಶೀಲಿಸಿಲ್ಲ. ರೈತರ ಕುಂದು-ಕೊರತೆಗಳನ್ನು ಆಲಿಸಿ ಸ್ಪಂದಿಸಿಲ್ಲ. ಅನ್ನದಾತರ ಬಗ್ಗೆ ಇಷ್ಟೊಂದು ಅನಾದರ, ನಿರ್ಲಕ್ಷ್ಯ ಧೋರಣೆ ಸರಿಯಲ್ಲವೆಂದು ಬಿ.ಸಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಿಜೆಪಿ ವಿರೋಧಿಸುವುದಿಲ್ಲ. ಆದರೆ ಈ ಯೋಜನೆಗಾಗಿ ಖಜಾನೆ ಖಾಲಿ ಮಾಡಿಕೊಂಡು, ಕಷ್ಟದಲ್ಲಿರುವವರಿಗೆ ನೆರವು ನೀಡಲಾಗದೆ ಕೈಚೆಲ್ಲಿದೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಂಡಂತೆಯೇ ಬೆಳೆ ನಷ್ಟ ಪರಿಹಾರಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಡೀರಿಸಿ ತತ್ತರಿಸಿರುವ ರೈತರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಇದೊಂದು ರೈತರ ಆತ್ಮಹತ್ಯೆ ಗ್ಯಾರಂಟಿ ಸರ್ಕಾರವಾಗಿದೆ ಎಂದು ಬಿ.ಸಿ.ಪಾಟೀಲ್ ಕಿಡಿಕಾರಿದರು.
ಸಿದ್ದರಾಮಯ್ಯ ಮೊದಲ ಆಡಳಿತಾವಧಿ ಅಂಕಿ-ಅಂಶಗಳ ಪ್ರಕಾರ 2015-16ರಲ್ಲಿ 1,525, 16-17ರಲ್ಲಿ 1,203, 17-18ರಲ್ಲಿ 1,320, ಸಮ್ಮಿಶ್ರ ಸರ್ಕಾರದ ಅವಧಿ 18-19ರಲ್ಲಿ 1,085, ಬಿಜೆಪಿ ಅವಧಿಯಲ್ಲಿ 2019-20ರಲ್ಲಿ 1,091, 20-21ರಲ್ಲಿ 855, 21-22ರಲ್ಲಿ 963 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಷ್ಟ, ಸಾಲದ ಬಾಧೆ ತಾಳದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಇಳಿಕೆಯ ದಾರಿಯಲ್ಲಿತ್ತು. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿ.ಸಿ.ಪಾಟೀಲ್ ಕಳವಳ ವ್ಯಕ್ತಪಡಿಸಿದರು.