

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಪರಿಶಿಷ್ಟರ ಹಾಸ್ಟೆಲ್ಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡದ ವಿಚಾರ ಸಂಬಂಧ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ(ಪಿಐಎಲ್) ದಾಖಲಿಸಕೊಂಡಿರುವ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಗುರುವಾರ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತಂತೆ ಮರಾಠಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ಆಧರಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲಿಸಿರುವ ಸ್ವಯಂ ಪ್ರೇರಿತ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ರಾಜ್ಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಜರಾಗಿ, ಪ್ರಕರಣದ ಕುರಿತು ಗಮನ ಹರಿಸಲಾಗುವುದು. ಮುಂದಿನ ವಿಚಾರಣೆ ವೇಳೆ ವಸ್ತುಸ್ಥಿತಿ ವರದಿ ಸಲ್ಲಿಸಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಅಲ್ಲದೆ, ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಅಗತ್ಯ ನೆರವು ಹಾಗೂ ಸಲಹೆ ನೀಡಲು ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ನಿತಿನ್ ರಮೇಶ್ ಅವರನ್ನು ಅಮಿಕಸ್ ಕ್ಯೂರಿ ಆಗಿ ನ್ಯಾಯಪೀಠ ನೇಮಕ ಮಾಡಿತು. ಅವರಿಗೆ ಪ್ರಕರಣದ ಕುರಿತ ಅರ್ಜಿಯ ಪ್ರತಿ ಹಾಗೂ ಇತರೆ ಎಲ್ಲಾ ಅಗತ್ಯ ದಾಖಲೆಗಳನ್ನು ಅಮಿಕಸ್ ಕ್ಯೂರಿ ಅವರಿಗೆ ಒದಗಿಸುವಂತೆ ರಿಜಿಸ್ಟ್ರಿಗೆ ಸೂಚಿಸಿತು.
ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಪರಿಶಿಷ್ಟ ಜಾತಿಯ ಬಾಲಕಿಯರ ಮತ್ತು ಬಾಲಕರ ಹಾಸ್ಟೆಲ್‌ನಲ್ಲಿ ಮಂಜೂರಾತಿಗೆ ಪ್ರಮಾಣಕ್ಕಿಂತ ಕಡಿಮೆ ಸಿಬ್ಬಂದಿ ಇದ್ದಾರೆ. ಕಾಲಕಾಲಕ್ಕೆ ಸಿಬ್ಬಂದಿಯ ನೇಮಕಾತಿ ನಡೆಯುತ್ತಿಲ್ಲ. ಕೆಲ ಜಿಲ್ಲೆಯಗಳಲ್ಲಿ ಮೂರು-ನಾಲ್ಕು ಹಾಸ್ಟೆಲ್‌ನಲ್ಲಿ ಓರ್ವ ವಾರ್ಡನ್ ಮತ್ತು ಅಧೀಕ್ಷಕರು ಇದ್ದಾರೆ. ಇದು ವಿದ್ಯಾರ್ಥಿಗಳ ಕಲಿಕೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರೀಕ್ಷೆಯಲ್ಲಿ ಅವರ ಫಲಿತಾಂಶ ಪ್ರಮಾಣ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ, ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಳ್ಳಲು ಇದು ಅರ್ಹ ಪ್ರಕರಣವಾಗಿದೆ ಎಂದರು.
ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ಸರ್ಕಾರದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದಾಗಿ ಈಗಾಗಲೇ ಹೈಕೋರ್ಟ್ ನಿರ್ದೇಶಿಸಿದೆ. ಆಸ್ಟ್ರೇಲಿಯಾ ಮತ್ತು ಅಮೆರಿಕಾ ದೇಶದಲ್ಲಿ ಸರ್ಕಾರದಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ಕುರಿತಂತೆ ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು. ಅದರಂತೆ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದಾಗಿ ನಿಯಮಗಳು ಜಾರಿಯಲ್ಲಿವೆ. ಈ ನಿಯಮಗಳು ನಮ್ಮ ದೇಶದಲ್ಲಿ ಇಲ್ಲ ಎಂದು ಹೇಳಿದರು.
ಅಲ್ಲದೆ, ಸಂವಿಧಾನ ರಚಿಸಿದ ನಮ್ಮ ಪೂರ್ವಜರು ಸರ್ಕಾರಗಳು ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತವೆ. ಯಾರೂ ಸಹ ಭರ್ತಿ ಮಾಡದೇ ಇರುವುದಿಲ್ಲ ಎಂಬುದಾಗಿ ಭಾವಿಸಿದ್ದರು. ದುರೃಷ್ಟವಶಾತ್ ಅದಕ್ಕೆ ವಿರೋಧಭಾಸವಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾಲ ಕಾಲಕ್ಕೆ ಖಾಲಿಯಿರುವ ಹುದ್ದೆಗಳು ಭರ್ತಿ ಮಾಡದೇ ಹೋದರೆ ಪ್ರತಿ ವರ್ಷ ವ್ಯವಸ್ಥೆಯೊಂದೇ ತೊಂದರೆ ಅನುಭವಿಸುವುದಿಲ್ಲ. ಉದ್ಯೋಗಿ ಆಕಾಂಕ್ಷಿಗಳ ವಯಸ್ಸು ಮೀರುತ್ತದೆ. ಅವರನ್ನು ಉದ್ಯೋವಕಾಶ ಕಲ್ಪಿಸುವುದರಿಂದ ಸರ್ಕಾರ ಹೊರಗಿಡುತ್ತದೆ. ಅವರು ಉದ್ಯೋಗವಕಾಶದಿಂದ ವಂಚಿತರಾಗುತ್ತಾರೆ. ಅವರನ್ನು ವ್ಯವಸ್ಥೆಯನ್ನು ತಪ್ಪಿಸಬೇಕು. ಕಾಲಕಾಲಕ್ಕೆ ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಪರಿಶೀಲನೆ ನಡೆಸಿ, ನೇಮಕಾತಿ ಪ್ರಕ್ರಿಯೆ ನಡೆಸಲು ಶಿಫಾರಸು ಮಾಡುವಂತಹ ಮೇಲ್ವಿಚಾರಣಾ ಘಟಕ ಇರಬೇಕಾಗುತ್ತದೆ. ಅವರು ಖಾಲಿಯಿರುವ ಹುದ್ದೆಗಳನ್ನು ಉಲ್ಲೇಖಿಸಿ, ನೇಮಕಾತಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವ ಕರ್ತವ್ಯ ಆ ಘಟಕದ್ದಾಗಿರುತ್ತದೆ ಎಂದು ಸಲಹೆ ನೀಡಿದರು.