

ನವದೆಹಲಿ: ಸರ್ಕಾರಿ ಉದ್ಯೋಗ ( Govt Job ) ಪಡೆಯುವ ಆಸೆಯಿಂದ ಕೆಲವರು ಅಕ್ರಮ ಮಾರ್ಗವನ್ನು ತುಳಿದು ಸಿಕ್ಕಿಬಿದ್ದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕೆಲವರು ಪ್ರಶ್ನೆ ಪತ್ರಿಕೆ ಖರೀದಿಸಿದರೆ, ಇನ್ನು ಕೆಲವರು ಉತ್ತರ ಪತ್ರಿಕೆಯನ್ನೇ ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಕೆಲವರಂತೂ ನಕಲಿ ಅಭ್ಯರ್ಥಿಗಳ ಸೋಗಿನಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನಾವೀಗ ಹೇಳ ಹೊರಟಿರುವ ಪ್ರಕರಣ ಕೊಂಚ ವಿಭಿನ್ನವಾಗಿದೆ. ಅದೇನೆಂದರೆ, ಸಹೋದರಿಯರಿಬ್ಬರು ನಕಲಿ ವಿಧವಾ ಪ್ರಮಾಣಪತ್ರಗಳನ್ನು ತೋರಿಸಿ ಸರ್ಕಾರಿ ಉದ್ಯೋಗವನ್ನು ಪಡೆದು, ಇದೀಗ ಅಧಿಕಾರಿಗಳ ಸಿಕ್ಕಿಬಿದ್ದಿದ್ದಾರೆ.
ರಾಜಸ್ಥಾನದಲ್ಲಿ ಹೊಸದಾಗಿ ರಚನೆಯಾದ ಬೀವರ್ ಜಿಲ್ಲೆಯಲ್ಲಿ ಇಬ್ಬರು ಸಹೋದರಿಯರು ಮಾಡಿದ ಮಹಾವಂಚನೆ ಬೆಳಕಿಗೆ ಬಂದಿದೆ. ನಕಲಿ ವಿಧವಾ ಪ್ರಮಾಣಪತ್ರವನ್ನು ಸಲ್ಲಿಸಿ ಸಹೋದರಿಯರಿಬ್ಬರೂ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಸೋದರ ಮಾವನ ಮರಣ ಪ್ರಮಾಣಪತ್ರವನ್ನು ಸಲ್ಲಿಸಿ ಸುನೀತಾ ಚೌಹಾಣ್ ಕೆಲಸ ಗಿಟ್ಟಿಸಿಕೊಂಡರೆ, ತಂಗಿ ರೇಖಾ ಚೌಹಾಣ್, ತನ್ನ ಗ್ರಾಮದ ಮದನ್ ಎಂಬ ವ್ಯಕ್ತಿಯ ಮರಣ ಪ್ರಮಾಣ ಪತ್ರ ಸಲ್ಲಿಸಿ ವಿಧವಾ ಕೋಟಾದಡಿ ಕೆಲಸ ಗಿಟ್ಟಿಸಿಕೊಂಡಿದ್ದಳು. ಇಬ್ಬರು ಸರ್ಕಾರಿ ಶಿಕ್ಷಕರಾಗಿದ್ದರು. ಸುನೀತಾ ಖೇಡಾ ಬೇವಾರ್ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರೆ, ರೇಖಾ, ರಾಜ್ಸಮಂದ್ ಜಿಲ್ಲೆಯ ಬದ್ನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
2022ರ ನೇಮಕಾತಿಯಲ್ಲಿ ಸುನೀತಾ ಚೌಹಾಣ್ ಶಿಕ್ಷಕಿಯಾಗಿದರೆ, ರೇಖಾ 2016-17ನೇ ಸಾಲಿನ ನೇಮಕಾತಿಯಲ್ಲಿ ಶಿಕ್ಷಕಿಯಾಗಿ ಆಯ್ಕೆಯಾಗಿದ್ದರು. ಆದರೆ ಇಬ್ಬರು ನಕಲಿ ವಿಧವಾ ಪ್ರಮಾಣಪತ್ರ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಸುನೀತಾ ಚೌಹಾಣ್ ತಮ್ಮ ಸೋದರ ಮಾವ ಛಗನ್ಲಾಲ್ ಅವರ ಮರಣ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ಛಗನ್ಲಾಲ್ ಮದುವೆಯಾಗಿದ್ದು, ಅವರ ಪತ್ನಿ ಜೀವಂತವಾಗಿದ್ದಾರೆ. ಛಗನ್ಲಾಲ್ ಸಾವಿನ ನಂತರ ಅವರ ಪತ್ನಿ ಅಪಘಾತ ವಿಮಾ ಮೊತ್ತವನ್ನು ಸಹ ಪಡೆದಿದ್ದಾರೆ. ಆದರೆ, ಸುನೀತಾ ಅವರ ಮರಣ ಪ್ರಮಾಣ ಪತ್ರವನ್ನು ಬಳಸಿದ್ದಾರೆ. ಇನ್ನು ಸುನೀತಾ 2022, ನವೆಂಬರ್ 25ರಂದು ಉದಯಪುರದ ನಿವಾಸಿ ನಿರ್ಮಲ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ.
ಮತ್ತೊಂದೆಡೆ, ರೇಖಾ ತನ್ನ ಗ್ರಾಮದ ಮದನ್ ಸಿಂಗ್ ಎಂಬಾತನ ಮರಣ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ಪಾಲಿಯ ಸೋಜತ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮದನ್ ಸಿಂಗ್ ಸಾವಿಗೀಡಾಗಿದ್ದಾರೆ. ಮದನ್ ಸಿಂಗ್ ಅವರು ಅವಿವಾಹಿತರಾಗಿದ್ದರಿಂದ ಅಪಘಾತದಲ್ಲಿ ಮೃತಪಟ್ಟ ನಂತರ ಅವರ ಪಾಲಕರು ಅಪಘಾತ ವಿಮೆ ಮೊತ್ತವನ್ನು ಪಡೆದರು. ಅವಿವಾಹಿತ ಮದನ್ ಅವರ ಮರಣ ಪ್ರಮಾಣ ಪತ್ರವನ್ನು ರೇಖಾ ಅವರು ಶಿಕ್ಷಕಿಯಾಗಲು ಬಳಸಿಕೊಂಡಿದ್ದರು.
ನಕಲಿ ಮರಣ ಪ್ರಮಾಣ ಪತ್ರ ಸಲ್ಲಿಸಿ ಇಬ್ಬರೂ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಸಹೋದರಿಯರಿಬ್ಬರ ಕುಟುಂಬಕ್ಕೆ ಬಿಜೆಪಿ ಪಕ್ಷದ ಸಂಪರ್ಕವಿದೆಯಂತೆ. ಕುಟುಂಬದ ಸದಸ್ಯರು ರಾಜಕೀಯದಲ್ಲಿದ್ದಾರೆ ಎನ್ನಲಾಗಿದೆ. ಸಹೋದರಿಯರಿಬ್ಬರ ತಂದೆ-ತಾಯಿ ಗ್ರಾಮದ ಮುಖ್ಯಸ್ಥರು. ಸುನೀತಾ ಅವರು ನಿರ್ಮಲ್ ಸಿಂಗ್ ಅವರನ್ನು ವಿವಾಹವಾದಾಗ, ಬಿಜೆಪಿ ಶಾಸಕ ಶಂಕರ್ ಸಿಂಗ್ ರಾವತ್ ಅವರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಇಬ್ಬರು ಸಹೋದರಿಯರ ಕುಟುಂಬದ ಕಾರ್ಯಕ್ರಮಗಳಲ್ಲಿ ಬಿಜೆಪಿ ನಾಯಕರು ಆಗಾಗ ಭಾಗವಹಿಸುತ್ತಿರುತ್ತಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)