ಪೆನ್‌ಡ್ರೈವ್ ಪ್ರಕರಣದಲ್ಲಿ ಸರ್ಕಾರದ ಚಿತಾವಣೆ: ಆರ್.ಅಶೋಕ್ ಸಂಶಯ

Assembly opposition leader R Ashok
Published on

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಲೈಂಗಿರ್ಕ ದೌರ್ಜನ್ಯಕ್ಕೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಸರ್ಕಾರ ಅದೇನೋ ಚಿತಾವಣೆ ನಡೆಸಿದಂತಿದೆ. ವಕೀಲ ದೇವರಾಜೇಗೌಡ ಒಂದು ಆಡಿಯೋ ಪುರಾವೆ ಬಿಟ್ಟ ಕೂಡಲೇ ಬಂಧಿಸಲಾಗಿದೆ. ಇನ್ನಷ್ಟು ಸಾಕ್ಷ್ಯ ಹಾಗೂ ದಾಖಲೆ ಬಿಡುಗಡೆ ಮಾಡಬಹುದು ಎಂಬ ಭಯವಿರಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಂಶಯ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಭಾನುವಾರ ಭೇಟಿಯಾಗಿ ಜನ್ಮ ದಿನದ ಶುಭಾಶಯ ಕೋರಿ ಬಂದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ 100 ಕೋಟಿ ರೂ. ಆರ್ ನೀಡಿದ್ದರು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ. ಆಡಿಯೋವೊಂದು ಬಯಲಾದ ಬೆನ್ನಲ್ಲೇ ದೇವರಾಜೇಗೌಡರ ಬಂಧನವಾಗಿರುವುದು ಗಮನಿಸಿದರೆ ಬೆಂಕಿಯಿಲ್ಲದೆ ಹೊಗೆಯಾಡದು ಎನ್ನುವಂತಾಗಿದೆ ಎಂದರು.

ದೇವರಾಜೇಗೌಡ ಹೇಳಿದ್ದೆಲ್ಲ ಸತ್ಯ ಇರಬಹುದು. ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಸಾಕ್ಷ್ಯ, ದಾಖಲೆಗಳು ಸರಣಿ ರೂಪದಲ್ಲಿ ಹೊರಬಂದರೆ ಸರ್ಕಾರಕ್ಕೆ ಮುಜುಗರವಾಗುತ್ತದೆ. ಇದರಿಂದ ಪಾರಾಗಲೆಂದು ಅವರನ್ನು ಬಂಧಿಸಿದ್ದಾರೆ. ರಂದೀಪ್ ಸಿಂಗ್ ಸುರ್ಜೇವಾಲಾ, ಸಿಎಂ, ಡಿಸಿಎಂ ಸೇರಿಕೊಂಡು ಹೆಣೆದ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎಂದು ಆರ್.ಅಶೋಕ್ ಆರೋಪಿಸಿದರು.

ಸಿಬಿಐಗೆ ಒಪ್ಪಿಸಲಿ

ಲೈಂಗಿಕ ದೌರ್ಜನ್ಯ, ಪೆನ್‌ಡ್ರೈವ್ ಹಂಚಿಕೆ ಸತ್ಯಾಂಶವನ್ನು ಎಸ್‌ಐಟಿ ಪತ್ತೆ ಹಚ್ಚುವುದು ಅಸಾಧ್ಯ. ಇದೊಂದು ಸರ್ಕಾರಿ ಪ್ರಾಯೋಜಿತ ತನಿಖೆಯಾಗಲಿದೆಷ್ಟೇ. ಪ್ರಕರಣದಲ್ಲಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಾನೂನುರೀತ್ಯ ಶಿಕ್ಷೆಗೆ ಒಳಪಡಿಸಲು ಸಿಬಿಐ ತನಿಖೆಗೆ ಒಪ್ಪಿಸಬೇಕು. ಸರ್ಕಾರಕ್ಕೆ ಪ್ರಾಮಾಣಿಕ ಕಾಳಜಿ ಇರುವುದಾದರೆ ಸಿಬಿಐಗೆ ಕೊಡಲು ಹಿಂದೇಟು ಹಾಕುತ್ತಿರುವುದೇಕೆ ? ಎಂದು ಕೇಳಿದರು.

ಈ ಹಿಂದೆ ಕೆ.ಜೆ.ಜಾರ್ಜ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದರು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ಇಲ್ಲವೇ ಹೊರಬರುತ್ತಾರೆ. ಪ್ರಜ್ವಲ್ ರೇವಣ್ಣ ಸೇರಿ ಎಲ್ಲರಿಗೂ ಅನ್ವಯವಾಗುತ್ತದೆ. ಎಸ್‌ಐಟಿಯಿಂದ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯುತ್ತದೆ ಎಂಬ ನಂಬಿಕೆಯಿಲ್ಲ ಎಂದರು.

ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಡಾ.ಜಿ.ಪರಮೇಶ್ವರ್ ಸಿಎಂ ಆಗುವುದನ್ನು ತಪ್ಪಿಸಿ ದಲಿತರನ್ನು ಮುಗಿಸಿದರು. ಇದೀಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವನ್ನು ಗುರಿ ಮಾಡಿಕೊಂಡು, ರಾಜ್ಯದಲ್ಲಿ ಒಕ್ಕಲಿಗರನ್ನು ಮುಗಿಸಲು ಹುನ್ನಾರ ಹೂಡಿದಂತಿದೆ ಎಂದು ಆರ್.ಅಶೋಕ್ ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net