ಅನಧಿಕೃತ ಶಾಲೆಗಳಿಗೆ ಶಾಕ್ ನೀಡಿದ ಸರ್ಕಾರ: ತಕ್ಷಣವೇ ಮುಚ್ಚಿಸುವಂತೆ ಸೂಚನೆ

schoold education
Published on

ಬೆಂಗಳೂರು: ರಾಜ್ಯದಲ್ಲಿರುವ ಅನಧಿಕೃತ ಶಾಲೆಗಳನ್ನು ಗುರುತಿಸಿ ಆ.16ರೊಳಗೆ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾ ಉಪ ನಿರ್ದೇಶಕರಿಗೆ ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.

ಜಿಲ್ಲಾ ಉಪನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿರುವ ಅನಧಿಕೃತ ಶಾಲೆಗಳನ್ನು ಗುರುತಿಸಿ ನಿಯಮಾನುಸಾರ ಕ್ರಮ ವಹಿಸಲು ನಿರ್ಲಕ್ಷ್ಯ ವಹಿಸಬಾರದು. ಕೈಗೊಂಡ ಕ್ರಮಗಳ ಬಗ್ಗೆ ಪತ್ರಿಕಾ ಪ್ರಕಟಣೆ ನೀಡುವಂತೆ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ನೋಂದಣಿ ಅನುಮತಿ ಪಡೆಯದೆ ಶಾಲೆ ನಡೆಸುತ್ತಿದ್ದಲ್ಲಿ ಅಂತಹ ಶಾಲೆಗಳನ್ನು ಆ.14ರೊಳಗೆ ಮುಚ್ಚಿಸಬೇಕು. ನೋಂದಣಿ ಪಡೆಯದ ಅನಧಿಕೃತವಾಗಿ ಶಾಲೆಗಳ ಬಗ್ಗೆ ದೂರು ಬಂದರೆ ಜಿಲ್ಲಾ ಉಪ ನಿರ್ದೇಶಕರನ್ನೇ ಹೊಣೆ ಮಾಡಲಾಗುವುದು. ಈ ಸಂಬಂಧ ನಿಗದಿತ ಅವಧಿಯೊಳಗೆ ಯಾವುದೇ ಮಾಹಿತಿ ಸಲ್ಲಿಸದಿದ್ದರೆ ಕರ್ತವ್ಯ ಲೋಪವೆಂದು ಭಾವಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಪಠ್ಯಕ್ರಮದಲ್ಲಿ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮಕ್ಕೆ ನಿರಾಕ್ಷೇಪಣಾ ಪತ್ರ ಮತ್ತು ಅನುಮತಿ ನಡೆಯದ ಶಾಲೆಗಳು ಸಂಯೋಜನೆ ಪಡೆಯುವವರೆಗೂ ರಾಜ್ಯ ಪಠ್ಯಕ್ರಮವನ್ನೇ ಬೋಧಿಸುವಂತೆ ಶಾಲೆಗಳಿಗೆ ನೋಟಿಸ್ ನೀಡಬೇಕು.

ನೋಂದಣಿ ಪಡೆದ ಮಾಧ್ಯಮದಲ್ಲಿ ಬೋಧಿಸದೇ ಅನಧಿಕೃತವಾಗಿ ಬೇರೆ ಮಾಧ್ಯಮದಲ್ಲಿ ಬೋಧಿಸುತ್ತಿರುವ ಶಾಲೆಗಳು, ಇಲಾಖೆ ಅನುಮತಿ ಇಲ್ಲದೇ ಸ್ಥಳಾಂತರ ಅಥವಾ ಹಸ್ತಾಂತರಗೊಂಡ ಶಾಲೆಗಳಿಗೂ ನೋಟಿಸ್ ಜಾರಿ ಮಾಡಬೇಕು. ಅನಧಿಕೃತವಾಗಿ ಹೆಚ್ಚುವರಿ ವಿಭಾಗಗಳನ್ನು ಹೊಂದಿರುವ ಶಾಲೆಗಳ ಮೇಲೆ ಕ್ರಮ ಜರುಗಿಸಲು ಪ್ರತ್ಯೇಕ ಸುತ್ತೋಲೆ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net