

ನವದೆಹಲಿ: ದೇಶದಲ್ಲಿ ಮಾರ್ಚ್ 11ರಂದು ಕರೊನಾ ಸೋಂಕು ಪೀಡಿತ ಮೃತಪಟ್ಟ ಮೊದಲ ಪ್ರಕರಣದ ಸಂದರ್ಭದಲ್ಲಿ ಸೋಂಕು ಪೀಡಿತರ ಸಂಖ್ಯೆ 50 ಇತ್ತು. ಇದಾಗಿ ಎರಡು ವಾರಗಳ ಅವಧಿಯಲ್ಲಿ ಕರೊನಾ ಪೀಡಿತರ ಸಂಖ್ಯೆ 900ರ ಆಸುಪಾಸು ತಲುಪಿದೆ. ಶನಿವಾರ ಬೆಳಗ್ಗೆ COVID19 ಕೇಸ್ಗಳ ಸಂಖ್ಯೆ 149 ಹೆಚ್ಚಳವಾಗಿದ್ದು, ಒಟ್ಟಾರೆ ಸಂಖ್ಯೆಯನ್ನು 873ಕ್ಕೆ ಏರಿಸಿದೆ. ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಇದಕ್ಕೆ ಹೊರತಾಗಿ ಇದೇ ಮೊದಲ ಬಾರಿ ಕೇರಳದಲ್ಲೂ ಒಂದು ಮರಣ ದಾಖಲಾಗಿದೆ.
ಪರಿಷ್ಕೃತ ಪಟ್ಟಿಯ ಪ್ರಕಾರ ದೇಶದಲ್ಲಿ ಕರೊನಾ ಸೋಂಕುಪೀಡಿತರ ಸಂಖ್ಯೆಯಲ್ಲಿ 78 ಜನರಿಗೆ ಸೋಂಕು ನಿವಾರಣೆಯಾಗಿದ್ದು, ಆರೋಗ್ಯ ಸುಧಾರಿಸಿದೆ. ಸೋಂಕುಪೀಡಿತರ ಸಂಖ್ಯೆಯ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದ್ದು, 177 ಕೇಸ್ಗಳು ಪತ್ತೆಯಾಗಿವೆ. ಎರಡನೇ ಸ್ಥಾನದಲ್ಲಿ ಕೇರಳ ಇದ್ದು 165 ಕೇಸ್ಗಳಿವೆ. ಮರಣ ಪ್ರಮಾಣ ನೋಡಿದರೆ ಮಹಾರಾಷ್ಟ್ರದಲ್ಲಿ 5, ಗುಜರಾತ್ ಮತ್ತು ಕರ್ನಾಟಕದಲ್ಲಿ ತಲಾ 3, ಮಧ್ಯಪ್ರದೇಶ 2, ತಮಿಳುನಾಡು, ಬಿಹಾರ, ಪಂಜಾಬ್, ದೆಹಲಿ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಸ್ಕ್ರೀನಿಂಗ್ ಮತ್ತು ಇತರೆ ಕ್ರಮಗಳನ್ನು ತೆಗೆದುಕೊಂಡಿದ್ದರೂ, ಈ ಸೋಂಕು ಈಗ ಜಗತ್ತಿನ 192 ರಾಷ್ಟ್ರಗಳಿಗೆ ಹರಡಿವೆ ಎಂದರೆ ಇದರ ತೀವ್ರತೆಯನ್ನು ನಾವು ಮನಗಾಣಬೇಕು. ನಮ್ಮ ದೇಶ ಈಗ ಲಾಕ್ಡೌನ್ ಸ್ಥಿತಿಯಲ್ಲಿದ್ದು, ಬಹಳಷ್ಟು ಜನ ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತಿದ್ದಾರೆ. ಈ ಕೇಸ್ಗಳ ನಿರ್ವಹಣೆಯನ್ನು ನಾವು ಇನ್ನಷ್ಟು ಸುಧಾರಿಸುತ್ತಿದ್ದು, ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಕೇಂದರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ. (ಏಜೆನ್ಸೀಸ್)