

ಬೆಂಗಳೂರು ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ರಾಜ್ಯ ಸರ್ಕಾರವು 2024-25ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ವಿವಿಧ ವಿಷಯಗಳ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ೋಷಿಸಿತ್ತು.
ಅದರಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಂಜೂರಾತಿಗಾಗಿ ಖಾಲಿ ಇರುವ ಒಟ್ಟು 6,584 ಹುದ್ದೆಗಳ ಪೈಕಿ ಶೇ.80 ಹುದ್ದೆಗಳನ್ನು ಅಂದರೆ 5,267 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 5,267 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ. ನೇಮಕಾತಿ ಪೂರ್ವ ಪ್ರಕ್ರಿಯೆಗಳು ಮುಕ್ತಾಯಗೊಂಡ ನಂತರ ಮತ್ತು ನೇಮಕಾತಿ ಆದೇಶ ನೀಡುವ ಮೊದಲು ಹುದ್ದೆಗಳಿಗೆ ತಗುಲಬಹುದಾದ ಆರ್ಥಿಕ ಆಯವ್ಯವವನ್ನು ಅಂದಾಜಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ನಡಾವಳಿ ಹೊರಡಿಸಿದ್ದಾರೆ.
ಹುದ್ದೆಗಳ ವಿವರ
ತರಗತಿ ಹುದ್ದೆಗಳ ಸಂಖ್ಯೆ
ಪಿಎಸ್‌ಟಿ 1ರಿಂದ5ನೇ ತರಗತಿ 4,424
ಜಿಪಿಟಿ 6ರಿಂದ8ನೇ ತರಗತಿ 78
ಪಿಇಟಿ (ಗ್ರೇಡ್-2) 380
ಎಸ್‌ಇಸಿ ಎಎಂ 121
ಎಸ್‌ಇಸಿ ಪಿಇಟಿ 216
ಎಸ್‌ಇಸಿ ವಿಶೇಷ 48
ಒಟ್ಟು 5,267