

ನವದೆಹಲಿ: ಉಪಗ್ರಹ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಅವರು ಸರ್ಕಾರದ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ ಎಂಬ ಅಮೆರಿಕದ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಆರೋಪದ ಬೆನ್ನಲ್ಲೇ, ಭಾರತ ಹರಾಜು ಪ್ರಕ್ರಿಯೆಯನ್ನು ಕೈಬಿಟ್ಟಿದೆ.
ವಾರ್ಷಿಕ ಶೇಕಡ 36ರ ವೃದ್ಧಿದರದಲ್ಲಿ ಬೆಳೆಯುತ್ತಿರುವ ಉಪಗ್ರಹ ಸೇವೆಯು 2030ರ ಹೊತ್ತಿಗೆ 16 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುವ ಉದ್ಯಮ ವಾಗುವ ಸಾಧ್ಯತೆಯಿದ್ದು, ಇದನ್ನು ಪಡೆಯಲು ಜಗತ್ತಿನ ಇಬ್ಬರು ಶತಕೋಟಿ ಒಡೆಯರ (ಅಂಬಾನಿ ಮತ್ತು ಮಸ್ಕ್) ನಡುವೆ ಪೈಪೋಟಿ ನಡೆದಿದೆ.
‘ಆಡಳಿತಾತ್ಮಕ ಪರವಾನಗಿ ಹಂಚಿಕೆಯು ಸದ್ಯ ಜಾಗತಿಕ ಮಟ್ಟದಲ್ಲಿರುವ ಪದ್ಧತಿ’ ಎಂದು ಸ್ಟಾರ್ಲಿಂಕ್ ಎಂಬ ಬಾಹ್ಯಾಕಾಶ ಅನ್ವೇಷಣೆಯ ಉದ್ದಿಮೆ ಹೊಂದಿರುವ ಮಸ್ಕ್ ಹೇಳಿದ್ದಾರೆ. ಆದರೆ, ಇದಕ್ಕೆ ತಿರುಗೇಟು ನೀಡಿರುವ ಮುಕೇಶ್ ಅಂಬಾನಿ, ‘ಉಪಗ್ರಹದ ತರಂಗಾಂತರವನ್ನು ಒಬ್ಬರಿಗೆ ಹಂಚಿಕೆ ಮಾಡಲು ಭಾರತದ ಕಾನೂನಿನಲ್ಲಿ ಅವಕಾಶವಿಲ್ಲ. ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಸ್ಪರ್ಧೆಗೆ ಸಮನಾದ ವೇದಿಕೆ ಸಿಗಲಿದೆ’ ಎಂದಿದ್ದಾರೆ. ಸ್ವದೇಶಿ ಬ್ರಾಡ್ಬ್ಯಾಂಡ್ ತರಂಗಾಂತರ ಹಂಚಿಕೆಯನ್ನು ಹರಾಜು ನಡೆಸದೆ, ಹಂಚಿಕೆ ಮಾಡುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಕ್ರಮಕ್ಕೆ ರಿಲಯನ್ಸ್ ಭಾನುವಾರ ಆಕ್ಷೇಪ ವ್ಯಕ್ತಪಡಿಸಿತ್ತು. ಭಾರ್ತಿ ಏರ್ಟೆಲ್ನ ಸುನಿಲ್ ಮಿತ್ತಲ್ ಕೂಡ ಹರಾಜು ಪ್ರಕ್ರಿಯೆಗೆ ಬೆಂಬಲ ಸೂಚಿಸಿದ್ದಾರೆ. ‘ದೂರಸಂಪರ್ಕ ಪ್ರಾಧಿಕಾರವು ನಿಗದಿಪಡಿಸಿದ ಬೆಲೆಗೆ ತರಂಗಾಂತರವನ್ನು ಈ ನೆಲದ ಕಾನೂನಿನ ಅನ್ವಯವೇ ಹಂಚಿಕೆ ಮಾಡಲಾಗುವುದು. ಆದರೆ ಅದು ಹರಾಜು ಪ್ರಕ್ರಿಯೆ ಮೂಲಕವೇ ನಡೆಯಬೇಕು ಎಂದು ನೀವು ನಿರ್ಧರಿಸಿದ್ದರೆ, ಅದು ಜಗತ್ತಿನಲ್ಲಿರುವ ಕಾನೂನಿಗಿಂತ ಭಿನ್ನವಾಗಿರುವುದನ್ನು ಬಯಸುತ್ತಿದ್ದೀರಿ ಎಂದರ್ಥ’ ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇತ್ತೀಚೆಗೆ ಪ್ರತಿಕ್ರಿಯಿಸಿದದ್ದರು.
ವಾದವೇನು?: ಭಾರತದಲ್ಲಿ ಸ್ಯಾಟಲೈಟ್ ಬ್ರಾಡ್ಬ್ಯಾಂಡ್ ಸ್ಪೆಕ್ಟ್ರಮ್ ಹಂಚಿಕೆ ಹರಾಜು ಮಾರ್ಗದ ಮೂಲಕ ಆಗಬೇಕೆಂದು ಅಂಬಾನಿ ಬಯಸಿದರೆ, ಆಡಳಿತಾತ್ಮಕವಾಗಿ ಹಂಚಿಕೆ ಆಗಬೇಕೆಂದು ಮಸ್ಕ್ ಆಗ್ರಹ. ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಕೇಂದ್ರ ಸರ್ಕಾರ ಉಪಗ್ರಹ ತರಂಗಾಂತರ ಹರಾಜನ್ನು ಕೈಬಿಟ್ಟಿದೆ.
ಮುಂದೇನು?: ಸ್ಯಾಟಲೈಟ್ ಬ್ರಾಡ್ಬ್ಯಾಂಡ್ ಸ್ಪೆಕ್ಟ್ರಮ್್ನು ಹರಾಜು ಹಾಕುವ ಬದಲು ಆಡಳಿತಾತ್ಮಕ ಮಾರ್ಗದಿಂದ ವಿತರಣೆ ಮಾಡುವ ಬಗ್ಗೆ ಭಾರತ ಸರ್ಕಾರ ನಿರ್ಧಾರ ಮಾಡಿದ್ದಕ್ಕೆ ಮಸ್ಕ್ ಸಂತಸ ವ್ಯಕ್ತಪಡಿಸಿದ್ದಾರೆ. ಸ್ಯಾಟಲೈಟ್ ಬ್ರಾ್ಯಡ್ಬ್ಯಾಂಡ್ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆಗೆ ಹೋದಲ್ಲಿ, ಭಾರತದಲ್ಲಿ ತಮ್ಮ ದೊಡ್ಡ ಪ್ರತಿಸ್ಪರ್ಧಿಯಾಗಿರುವ ಮುಕೇಶ್ ಅಂಬಾನಿ ಹರಾಜು ಪಡೆದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಅಧಿಕಾರಿಗಳಿಗೆ ಲಾಬಿ ಮಾಡಬಹುದು ಎನ್ನುವ ಆತಂಕ ವ್ಯಕ್ತಪಡಿಸಿದ್ದರು. ಮಸ್ಕ್ ಟೀಕೆ ಬಂದ ಬಳಿಕ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ‘ಸ್ಯಾಟಲೈಟ್ ಬ್ರಾಡ್ಬ್ಯಾಂಡ್ ಸ್ಪೆಕ್ಟ್ರಮ್ ಹರಾಜು ಹಾಕೋದಿಲ್ಲ, ಆಡಳಿತಾತ್ಮಕವಾಗಿ ಇದನ್ನು ನೀಡಲಿದ್ದೇವೆ’ ಎಂದಿದ್ದಾರೆ.
ಸಿಂಧಿಯಾಗೆ ಥ್ಯಾಂಕ್ಸ್ ಎಂದ ಎಲಾನ್ ಮಸ್ಕ್: ಉಪಗ್ರಹ ಸೇವೆಗಳಿಗೆ ಸ್ಪೆಕ್ಟ್ರಮ್ ಹರಾಜು ಮಾಡುವಲ್ಲಿ ಭಾರತೀಯ ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ಸುನಿಲ್ ಭಾರತಿ ಮಿತ್ತಲ್ ಅವರ ಅಭಿಪ್ರಾಯವನ್ನು ಒಪ್ಪದ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಟೆಕ್ ಬಿಲಿಯನೇರ್ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಧನ್ಯವಾದ ತಿಳಿಸಿದ್ದು, ತಾವು ಭಾರತೀಯರ ಸೇವೆ ಸಲ್ಲಿಸಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ‘ಉಪಗ್ರಹ ಸ್ಪೆಕ್ಟ್ರಮ್ ಹರಾಜು ಮಾಡಲಾಗುವುದಿಲ್ಲ’ ಎಂಬ ಸಿಂಧಿಯಾ ಅವರ ಹೇಳಿಕೆಗೆ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಮಸ್ಕ್, ‘ಸ್ಟಾರ್ಲಿಂಕ್ನೊಂದಿಗೆ ಭಾರತದ ಜನರಿಗೆ ಸೇವೆ ಸಲ್ಲಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ’ ಎಂದು ಹೇಳಿದ್ದಾರೆ.