

ಕನಕಪುರ : ಅಚ್ಛೇದಿನ್ ಎಂದು ಹೇಳುತ್ತ, ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಸುತ್ತ ದೇಶದ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು ಟೀಕಿಸಿದರು.
ನಗರದಲ್ಲಿ ಬ್ಲಾಕ್ ಮತ್ತು ಯುವ ಕಾಂಗ್ರೆಸ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ರ‌್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡುವ ಮೂಲಕ ಬಡವರು ಹಾಗೂ ಜನಸಾಮಾನ್ಯರು ನೆಮ್ಮದಿ ಬದುಕು ಸಾಗಿಸುತ್ತಿದ್ದರು.
ನಂತರ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಗತ್ಯ ವಸ್ತುಗಳು, ತೈಲ, ಅಡುಗೆ ಅನಿಲದ ಬೆಲೆ ಏರಿಕೆಯಿಂದ ಜನ ತತ್ತರಿಸಿಹೋಗಿದ್ದಾರೆ. ಕರೊನಾ ನಿಯಂತ್ರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಲವಾದ ಕಾರಣ ಲಕ್ಷಾಂತರ ಸಾವು ನೋವುಗಳಾಗಿ ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಇಂತಹ ಜನವಿರೋಧಿ ಸರ್ಕಾರಗಳು ಒಂದು ಕ್ಷಣ ಕೂಡ ಅಧಿಕಾರಿದಲ್ಲಿರಬಾರದು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ವೇಣುಗೋಪಾಲ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರಿಗಾಗಿ ವಿವಿಧ ‘ಭಾಗ್ಯ’ಗಳ ಜನಪರ ಯೋಜನೆಗಳನ್ನು ಜಾರಿಗೆ ತಂದಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಆ ಎಲ್ಲ ಭಾಗ್ಯಗಳನ್ನು ಸಮಾಧಿ ಮಾಡಿ ಬೆಲೆ ಏರಿಸುವ ಮೂಲಕ ಜನಾಕ್ರೋಶಕ್ಕೆ ಕಾರಣವಾಗಿದೆ. ಇಂತಹ ಸರ್ಕಾರವನ್ನು ಕಿತ್ತೊಗದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ ಎಂದರು.
ಎಂಎಲ್‌ಸಿ ಎಸ್. ರವಿ ಮಾತನಾಡಿದರು.ಕೆಪಿಸಿಸಿ ಕಾನೂನು ವಿಭಾಗದ ಎಸ್.ಎ. ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಕೃಷ್ಣಮೂರ್ತಿ, ಎಂ.ಡಿ. ವಿಜಯದೇವ್, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಹಿಣಿ ಪ್ರಿಯ, ಟಿಎಪಿಸಿಎಂಎಸ್ ಅಧ್ಯಕ್ಷ ತಮ್ಮಣ್ಣಗೌಡ, ಜಿಲ್ಲಾ ಕಾಂಗ್ರೆಸ್ ವಕ್ತಾರ ಹೊಸಕೋಟೆ ಪುರುಷೋತ್ತಮ್, ತಾಪಂ ಮಾಜಿ ಅಧ್ಯಕ್ಷ ರಾಜಶೇಖರ್, ಮಾಜಿ ಉಪಾಧ್ಯಕ್ಷ ಕೋಡಿಹಳ್ಳಿ ಮಾದೇಶ್, ನಗರಸಭಾಧ್ಯಕ್ಷ ಮಹಮದ್ ಮಕ್ಬುಲ್‌ಪಾಷಾ, ಉಪಾಧ್ಯಕ್ಷ ಗುಂಡಣ್ಣ, ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್, ಜಿಲ್ಲಾ ಮುಖಂಡ ಹರೀಶ್, ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ದೀಪು, ಜಿ.ಪಂ. ಮಾಜಿ ಅಧ್ಯಕ್ಷ ಎಚ್.ಬಸಪ್ಪ, ಮುಖಂಡರಾದ ರಾಯಸಂದ್ರ ರವಿ, ರಾಜೇಂದ್ರ ಮತ್ತಿತರರು ಇದ್ದರು.
ಕಾಂಗ್ರೆಸ್‌ಗೆ ಬೆಂಬಲ: ರಾಜ್ಯ ಸರ್ಕಾರ ಕುಟುಂಬದ ಕಪಿಮುಷ್ಟಿಯಲ್ಲಿರುವುದಾಗಿ ಸರ್ಕಾರದ ಭಾಗವಾದ ಸಚಿವರೇ ಟೀಕಿಸುತ್ತಿದ್ದಾರೆ. ಇಂತಹ ಸರ್ಕಾರದಿಂದ ಜನ ಏನು ಬಯಸಲು ಸಾಧ್ಯ. ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಜನ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿನೂತನ ಪ್ರತಿಭಟನೆ : ನಗರದ ಕಲ್ಲಹಳ್ಳಿ ಗೇಟ್‌ನಿಂದ ಮುಖ್ಯಮಂತ್ರಿ ಚಂದ್ರು ಕುದುರೆ ಏರಿ ಬಂದರೆ, ಕಾರ್ಯಕರ್ತರು ಎತ್ತಿನಗಾಡಿಗೆ ಟ್ರ್ಯಾಕ್ಟರ್ ಕಟ್ಟಿ ಎಳೆಯುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಸೈಕಲ್ ಜಾಥಾ ಮೂಲಕ ಪ್ರತಿಭಟನಾಕಾರರು ಚನ್ನಬಸಪ್ಪ ವೃತ್ತದಲ್ಲಿ ಜಮಾವಣೆಗೊಂಡು ಪ್ರತಿಭಟಿಸಿ ನಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.