

ಈಗ ಎಲ್ಲಿ ನೋಡಿದರೂ ಕರೊನಾ ವೈರಸ್ ಹಾವಳಿಯದೇ ಸುದ್ದಿ, ಚರ್ಚೆ. ಜಗತ್ತಿನ ಬಹುತೇಕ ದೇಶಗಳನ್ನು ಕಾಡುತ್ತಿರುವ ಈ ವೈರಸ್ ಭಾರತದಲ್ಲೂ ತನ್ನ ಕರಾಮತ್ತು ತೋರಿಸುತ್ತಿದೆ. ಕರ್ನಾಟಕದಲ್ಲಿ ಈವರೆಗೆ 15 ಜನರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೂ ಹಲವರಲ್ಲಿ ಸೋಂಕಿನ ಲಕ್ಷಣ ಕಂಡುಬಂದಿದ್ದು, ಚಿಕಿತ್ಸೆ ಜಾರಿಯಲ್ಲಿದೆ. ಈ ಪೈಕಿ ಹಲವರು ಚೇತರಿಕೆಯ ಹಾದಿಯಲ್ಲಿರುವುದು ತುಸು ಸಮಾಧಾಕರ ಸಂಗತಿ. ಈ ನಡುವೆ, ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಕೆಲ ವಲಯಗಳ ಮೇಲಿನ ಸಾರ್ವಜನಿಕ ನಿರ್ಬಂಧವನ್ನು ಮಾರ್ಚ್ 31ರವರೆಗೆ ವಿಸ್ತರಿಸಿದೆ. ಈ ಸೋಂಕು ಈಗ ರಾಜ್ಯದಲ್ಲಿ ಎರಡನೆಯ ಹಂತದಲ್ಲಿದ್ದು, ಇದು ಮೂರು ಮತ್ತು ನಾಲ್ಕನೇ ಹಂತಕ್ಕೆ ಹೋಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಇದು ಅಗತ್ಯ ಕೂಡ.
ಇನ್ನು, ರಾಜ್ಯದ ಕೆಲ ಭಾಗಗಳಲ್ಲಿ ಹಕ್ಕಿಜ್ವರ ಕೂಡ ಕಾಣಿಸಿಕೊಂಡಿದೆ. ಹೀಗಾಗಿ, ಕೋಳಿಗಳನ್ನು ಸಾಮೂಹಿಕವಾಗಿ ಹತ್ಯೆಮಾಡುವ ಮೂಲಕ (ಕಲ್ಲಿಂಗ್) ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಮತ್ತೊಂದೆಡೆ, ಮಲೆನಾಡಿನ ಭಾಗಗಳಲ್ಲಿ ಮಂಗನ ಕಾಯಿಲೆ ಹಾವಳಿ ಹೆಚ್ಚಿದೆ. ಹೀಗೆ ಏಕಕಾಲಕ್ಕೆ ಮೂರ್ನಾಲ್ಕು ಕಾಯಿಲೆಗಳು ಕಾಣಿಸಿಕೊಂಡಿದ್ದರಿಂದಾಗಿ ಜನರು ಕಂಗಾಲಾಗುವಂತಾಗಿದೆ. ಇಂಥ ಸಂದರ್ಭದಲ್ಲಿ ಆತಂಕ ಸ್ವಲ್ಪಮಟ್ಟಿಗೆ ಸಹಜವಾದರೂ, ಅದಕ್ಕಿಂತ ಹೆಚ್ಚಾಗಿ, ಕಾಯಿಲೆ ಕುರಿತು ಸರಿಯಾದ ಮಾಹಿತಿ ಪಡೆದು ಚಿಕಿತ್ಸೆ ಪಡೆಯುವುದು ಮತ್ತು ಮುನ್ನೆಚ್ಚರಿಕೆ ವಹಿಸುವುದು ಬಹಳ ಪ್ರಮುಖವಾದುದು. ಇದರಲ್ಲಿ ಸರ್ಕಾರ ಮತ್ತು ಸಾರ್ವಜನಿಕರು ಇಬ್ಬರ ಪಾತ್ರವೂ ಇದೆ. ಕರೊನಾ ಸೋಂಕು ಹರಡದಂತೆ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಮಲೆನಾಡಿನಲ್ಲಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ಬಗ್ಗೆ ಸರ್ಕಾರ ಅಷ್ಟೊಂದು ಗಂಭೀರವಾಗಿಲ್ಲ ಎಂಬ ಆರೋಪ ಪ್ರತಿಪಕ್ಷಗಳಿಂದ ಮಾತ್ರವಲ್ಲ ಸ್ವಪಕ್ಷೀಯರಿಂದಲೂ ಕೇಳಿಬಂದಿದೆ.
ಈ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಬಿಸಿಬಿಸಿ ಚರ್ಚೆ ನಡೆದಿದ್ದು, ಶಾಸಕರು ಪರಿಸ್ಥಿತಿಯ ಗಂಭೀರತೆಯನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಶಿವಮೊಗ್ಗ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಂಗನ ಕಾಯಿಲೆಗೆ ಈ ವರ್ಷ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರ್ಕಾರ ನೀಡಿದ ಮಾಹಿತಿ ತಪ್ಪು ಎಂದ ಸಾಗರದ ಶಾಸಕರು ಮೃತರ ಸಂಖ್ಯೆ 23ಕ್ಕೆ ತಲುಪಿದೆ ಎಂಬುದಾಗಿ ಸದನದಲ್ಲಿ ಹೇಳಿದ್ದಾರೆ. ಈ ಕಾಯಿಲೆ ನಿಯಂತ್ರಣಕ್ಕೆ ಗಂಭಿರ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಶಾಕರು ಪಕ್ಷಭೇದ ಮರೆತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಷ್ಟಕ್ಕೂ, ಮಂಗನ ಕಾಯಿಲೆ ಹೊಸದೇನಲ್ಲ. ಇದು ಆಗಾಗ ಬಾಧಿಸುತ್ತಲೇ ಇರುತ್ತದೆ. ಆದರೆ, ಈ ಹಳೆ ಕಾಯಿಲೆಗೆ ಸಮರ್ಪಕವಾದ ಔಷಧ ಆವಿಷ್ಕಾರವಾಗಿಲ್ಲ. ಸೂಕ್ತ ಚಿಕಿತ್ಸಾಪದ್ಧತಿಯೂ ಅಭಿವೃದ್ಧಿ ಗೊಂಡಿಲ್ಲ. ಕಳೆದ ವರ್ಷವೂ ಮಂಗನ ಕಾಯಿಲೆಗೆ ಸರ್ಕಾರವೇ ಹೇಳುವ ಪ್ರಕಾರ 23 ಜನ ಬಲಿಯಾಗಿದ್ದಾರೆ. ಕರೊನಾ ವಿರುದ್ಧದ ಹೋರಾಟದ ಹೊತ್ತಲ್ಲಿ ಈ ಸಮಸ್ಯೆ ಗೌಣವಾಗದಿರಲಿ. ಈಗಾಗಲೇ, ಮಂಗನ ಕಾಯಿಲೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಮತ್ತು ಜನರು ಕೂಡ ಸಂಪೂರ್ಣ ಜಾಗ್ರತೆ ವಹಿಸುವುದಲ್ಲದೆ, ಸರ್ಕಾರ ತೆಗೆದುಕೊಳ್ಳುವ ಕ್ರಮಗಳಿಗೆ ಸಹಕರಿಸಬೇಕಿದೆ. ಆಗ ಮಾತ್ರ, ರಾಜ್ಯ ಕಾಯಿಲೆಗಳ ಸಂಕಟದಿಂದ ಪಾರಾಗಲು ಸಾಧ್ಯವಾಗಬಹುದು.