ಗೋವಿಂದಾಪುರ ಚೌಡೇಶ್ವರಿ ದೇಗುಲ ತೆರವು

TEMPLE
ದೇವಾಲಯ ತೆರವುಗೊಳಿಸಿದ ಅಧಿಕಾರಿಗಳನ್ನು ಎಸ್.ಎನ್.ಚನ್ನಬಸಪ್ಪ ಹಾಗೂ ಶಾರದಾ ಪೂರ‌್ಯಾನಾಯ್ಕಾ ತರಾಟೆಗೆ ತೆಗೆದುಕೊಂಡರು.
Published on

ಶಿವಮೊಗ್ಗ: ನಗರದ ಹೊರವಲಯದ ಗೋವಿಂದಾಪುರದಲ್ಲಿ ಸ್ಥಳೀಯರು ನಿರ್ಮಿಸಿದ್ದ ಚೌಡೇಶ್ವರಿ ದೇವಾಲಯವನ್ನು ತುಂಗಾ ಮೇಲ್ದಂಡೆ ಇಲಾಖೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ತೆರವುಗೊಳಿಸಿರುವುದು ಭಾರಿ ವಿವಾದಕ್ಕೆ ಕಾರಣವಾಯಿತು. ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಾಮಾನ್ಯವಾಗಿ ಆಗಿರುವ ಆದೇಶವನ್ನು ನಿರ್ದಿಷ್ಟವಾಗಿ ಈ ದೇವಾಲಯದ ಜಾಗಕ್ಕೆ ಮಾತ್ರ ಅನ್ವಯಿಸಿ ಅದನ್ನು ತೆರವು ಮಾಡಿರುವುದು ಎಷ್ಟು ಸರಿ? 2022ರಲ್ಲಿ ಆದೇಶವಾಗಿದೆ. ಅದಕ್ಕೂ ಮುನ್ನವೇ ಈ ಜಾಗದಲ್ಲಿ ದೇವಸ್ಥಾನವಿತ್ತು. ಆದರೆ ನೀವು ದೇವಸ್ಥಾನವನ್ನು ಕೆಡವಿ ಗರ್ಭಗುಡಿಯಲ್ಲಿದ್ದ ದೇವರನ್ನು ಬೀದಿಗೆ ತಂದಿದ್ದೀರಿ. ಇದುವರೆಗೆ ಎಷ್ಟೊಂದು ಆದೇಶಗಳಾಗಿವೆ. ಎಲ್ಲವನ್ನೂ ಪಾಲನೆ ಮಾಡಲಾಗಿದೆಯೇ? ಇದೊಂದು ಪ್ರಕರಣಕ್ಕೆ ಮಾತ್ರ ಆದೇಶದ ನೆಪ ಹೇಳುತ್ತಿರುವುದು ಎಷ್ಟು ಸರಿ ಎಂದು ಶಾಸಕದ್ವಯರು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರಿನ ಜಾಗದಲ್ಲಿ ನಮಾಜ್ ಮಾಡುತ್ತಿದ್ದರು ಎಂಬ ಕಾರಣಕ್ಕೆ ಆ ಜಾಗವನ್ನು ಪಾಲಿಕೆಯಿಂದ ವಕ್ಫ್‌ಗೆ ಖಾತೆ ಮಾಡಿಕೊಟ್ಟಿದ್ದಾರೆ. ಈ ಜಾಗದಲ್ಲಿ ಹಲವು ವರ್ಷಗಳಿಂದ ಬನ್ನಿ ಉತ್ಸವ ಮಾಡುತ್ತಿದ್ದರು. ಅದಕ್ಕೆ ದಾಖಲೆಗಳಿವೆ. ನಮಾಜ್ ಮಾಡಿರುವ ಜಾಗ ಅವರದಾಗುವುದಾದರೆ, ಈ ಜಾಗ ದೇವಾಲಯದ್ದು ಆಗಬೇಕಲ್ಲವೇ ಎಂದು ಎಸ್.ಎನ್.ಚನ್ನಬಸಪ್ಪ ಪ್ರಶ್ನಿಸಿದರು.

ಸಮುದಾಯದ ಧಾರ್ಮಿಕ ನಂಬಿಕೆಗಳು ಮತ್ತು ಸಂಸ್ಕೃತಿಯ ಪ್ರಾಮುಖ್ಯವನ್ನು ಗೌರವಿಸುವಂತೆ ಅಧಿಕಾರಿಗಳು ನಡೆದುಕೊಳ್ಳಬೇಕು. ಯಾವುದೇ ಕ್ರಮಗಳು ಜನರ ಭಾವನೆಗಳಿಗೆ ನೋವುಂಟು ಮಾಡಬಾರದು ಎಂದು ಹೇಳಿದರು.

ತಹಸೀಲ್ದಾರ್ ರಾಜೀವ್, ಡಿವೈಎಸ್ಪಿ ಬಾಬು ಅಂಜಿನಪ್ಪ, ಸಿಪಿಐ ಗುರುರಾಜ್ ಮುಂತಾದವರು ಸ್ಥಳದಲ್ಲಿದ್ದರು. ಬಳಿಕ ಶಾಸಕರಿಬ್ಬರೂ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರೊಂದಿಗೆ ಚರ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net