ರಾಜ್ಯಪಾಲರ ನಡೆ ರಾಜಕೀಯ ಪ್ರೇರಿತ: ಎಚ್.ಕೆ.ಪಾಟೀಲ

HK Patil
Published on

ಬೆಂಗಳೂರು: ರಾಜ್ಯಪಾಲರ ನಡೆ ಕಾನೂನು ಬಾಹಿರ, ತತ್ವ ರಹಿತ, ರಾಜಕೀಯ ಪ್ರೇರಿತವಾದಂತಹ ನಿರ್ಧಾರ. ಕೆಟ್ಟ ಬೆಳವಣಿಗೆಗೆ ಆಸ್ಪದ ನೀಡಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಅವರು ಕರ್ನಾಟಕ ಕಾಂಗ್ರೆಸ್ ಸರ್ಕಾರ 10 ತಿಂಗಳಲ್ಲಿ 6 ತಿಂಗಳಲ್ಲಿ ಪತನವಾಗುತ್ತದೆ ಎಂದು ಪದೇ ಪದೇ ಹೇಳುತ್ತಿದ್ದರು. 10 ದಿನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತು ಬರುತ್ತದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿದ್ದರು. ರಾಜ್ಯಪಾಲರ ನಡೆಯಿಂದ ಇವರ ಕುತಂತ್ರ ಕನ್ನಡದ ಜನತೆಗೆ ಗೊತ್ತಾಗಿದೆ ಎಂದು ಹೇಳಿದರು.

ಕನ್ನಡಿಗರ ಬಹುಮತದ ಮೇಲೆ ಆಯ್ಕೆಯಾಗಿರುವ ಸಿದ್ದರಾಮಯ್ಯನವರನ್ನು ಹಾಗೂ ಕಾಂಗ್ರೆಸ್ ಸರ್ಕಾರವನ್ನು ಯಾವುದೇ ಕುತಂತ್ರದ ಮೂಲಕ ಬುಡಮೇಲು ಮಾಡಲು ಆಗುವುದಿಲ್ಲ ಎಂದು ತಿರುಗೇಟು ನೀಡಿದರು.

ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯನವರು ಅತ್ಯಂತ ದಿಟ್ಟ ನಿಲುವುಗಳನ್ನು ತೆಗೆದುಕೊಂಡರು. ನಮ್ಮ ತೆರಿಗೆ ನಮ್ಮ ಹಕ್ಕು, ಬರ ಪರಿಹಾರ ನೀಡುವಲ್ಲಿ ವಿಳಂಬದ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದ ಕಾರಣಕ್ಕೆ ಅವರ ವಿರುದ್ಧ ಸೇಡಿನ ರಾಜಕಾರಣ ಮಾಡಲಾಗುತ್ತಿದೆ ಎಂದು ಪಾಟೀಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net