

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜ್ಯ ರಾಜಕಾರಣವನ್ನು ಕುತೂಹಲದ ತುದಿಗಾಲಲ್ಲಿ ನಿಲ್ಲಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣ ಮಹತ್ವದ ಘಟ್ಟ ತಲುಪಿದೆ. ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕ ರಿಸಿದೆ. ಇದರೊಂದಿಗೆ ಮೊದಲ ಹಂತದ ಕಾನೂನು ಹೋರಾಟ ದಲ್ಲಿ ಸಿಎಂಗೆ ಹಿನ್ನಡೆ ಆಗಿದೆ. ಈ ತೀರ್ಪನ್ನು ಹೈಕೋರ್ಟ್ ವಿಭಾ
ಗೀಯ ಪೀಠದಲ್ಲಿ ಪ್ರಶ್ನಿಸಲು ಸಿಎಂ ಕಾನೂನು ತಂಡ ಸಿದ್ಧತೆ ನಡೆಸಿರುವಂತೆಯೇ, ಇದೇ ಪ್ರಕರಣದ ವಿಚಾರಣೆ ಬುಧವಾರ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶುರುವಾಗಲಿರುವುದು ಕುತೂಹಲ ಹೆಚ್ಚಿಸಿದೆ. ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಸೆ.12ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಂಗಳವಾರ ಪ್ರಕಟಿಸಿತು. ಬರೋಬ್ಬರಿ 198 ಪುಟಗಳ ಸಮಗ್ರವಾದ ತೀರ್ಪು ಕೊಟ್ಟಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17 (ಎ) ಅನ್ವಯ ದೂರುದಾರರು ಅನುಮತಿಗೆ ಮನವಿ ಮಾಡಿರುವುದು ಸರಿಯಾಗಿದೆ.
ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸ್ಸನ್ನು ತಿರಸ್ಕರಿಸಿರುವುದರಲ್ಲಿಯೂ ತಪ್ಪೇನಿಲ್ಲ. ರಾಜ್ಯಪಾಲರು ತಮ್ಮ ವಿವೇಚನೆ ಬಳಸಿಯೇ ಆದೇಶ ನೀಡಿರುವ ಕ್ರಮ ಸರಿಯಾಗಿದೆ. ಭ್ರಷ್ಟಾಚಾರ ನಿರೋಧಕ ಕಾಯ್ದೆಯ ಸೆಕ್ಷನ್ 17 (ಎ) ಅನ್ವಯ ಪೊಲೀಸ್ ಅಧಿಕಾರಿಯೇ ಅನುಮತಿಯನ್ನು ಪಡೆಯಬೇಕೆಂದಿಲ್ಲ. ಈ ಪ್ರಕರಣದಲ್ಲಿ 17 ಎ ಅನ್ವಯ ಅನುಮತಿ ಕೇಳಿದ್ದು ಮತ್ತು ನೀಡಿರುವುದು ಸಮಂಜಸವಾಗಿದೆ. ಸೆಕ್ಷನ್ 17 ಎ ಅಡಿಯಲ್ಲಿ ಆದೇಶಕ್ಕೂ ಮುನ್ನ ದೂರುದಾರರ ಅಹವಾಲು ಅಲಿಸಬೇಕೆಂದಿಲ್ಲ. ರಾಜ್ಯಪಾಲರು ಕೇವಲ ಸೀಮಿತ ಅನುಮತಿಯಷ್ಟೇ ನೀಡಿದ್ದಾರೆ. ಬಿಎನ್ಎಸ್ಎಸ್ ಸೆಕ್ಷನ್ 218 ಅನ್ವಯ ಪೂರ್ವಾನುಮತಿ ನೀಡಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಸಿಎಂ ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವುಗೊಂಡಿದ್ದು, ಖಾಸಗಿ ದೂರಿನ ವಿಚಾರಣೆ ಬುಧವಾರಕ್ಕೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಿಗದಿಯಾಗಿದೆ. ದೂರುದಾರರಾದ ಸ್ನೇಹಮಯಿ ಕೃಷ್ಣ, ಟಿ.ಜೆ.ಅಬ್ರಾಹಂ ಹೈಕೋರ್ಟ್ ತೀರ್ಪಿನ ಪ್ರತಿ ಹಿಡಿದು ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡುವಂತೆ ಕೋರ್ಟ್ಗೆ ಮನವಿ ಮಾಡಲು ರೆಡಿಯಾಗಿದ್ದಾರೆ. ಮತ್ತೊಂದೆಡೆ ಬುಧವಾರವೇ ಸಿಎಂ ಪರ ವಕೀಲರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ.
ವಿರೋಧಿಗಳಿಗೆ ಸಂದೇಶ: ಕಾಂಗ್ರೆಸ್ನಲ್ಲಿ ಮುಂದೇನು ಎಂಬ ತಳಮಳ ಹೆಚ್ಚಾಗಿರುವ ನಡುವೆಯೇ, ತಾವು ಈ ತೀರ್ಪಿನಿಂದ ಜಗ್ಗಿಲ್ಲ ಕುಗ್ಗಿಲ್ಲ ಎಂಬ ಸಂದೇಶವನ್ನು ವಿರೋಧಿಗಳಿಗೆ ರವಾನಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ, ದೋಸ್ತಿಗಳ ಮೇಲೆ ಹರಿಹಾಯ್ದರು. ಹಾಗೆಯೇ, ನಾವು ಸಿಎಂ ಜತೆಗಿದ್ದೇವೆ ಎಂಬ ಸಂದೇಶ ಸಾರಲು ಡಿಸಿಎಂ ಡಿ.ಕೆ.ಶಿವಕುಮಾರ್ ಆದಿಯಾಗಿ ಸಂಪುಟ ಸದಸ್ಯರು ಈ ವೇಳೆ ಜತೆಗಿದ್ದರು. ಇಷ್ಟರ ನಡುವೆ ಸರ್ಕಾರಕ್ಕೆ ಸಂಧಿಕಾಲವಂತೂ ಶುರುವಾಗಿದ್ದು, ಇದರ ಪರಿಣಾಮ ಸ್ಪಷ್ಟವಾಗಲು ಇನ್ನಷ್ಟು ಕಾಲ ತೆಗೆದುಕೊಳ್ಳುವುದಂತೂ ನಿಚ್ಚಳ.
ತಡೆಯಾಜ್ಞೆಗೆ ನಕಾರ: ಸಿಎಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸುತ್ತಿರುವುದಾಗಿ ತೀರ್ಪು ಪ್ರಕಟಿಸಿದ ಕೂಡಲೇ ಸಿಎಂ ಪರ ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿ ಮಧ್ಯಪ್ರವೇಶಿಸಿದರು. ಮೇಲ್ಮನವಿ ಸಲ್ಲಿಸಲಿರುವುದರಿಂದ ಆದೇಶಕ್ಕೆ ತಡೆ ನೀಡುವಂತೆ ಮನವಿ ಸಲ್ಲಿಸಿದರು. ಆದರೆ, ತಡೆಕೊಡಲು ನಿರಾಕರಿಸಿದ ನ್ಯಾಯಪೀಠ ಮನವಿಯನ್ನು ತಳ್ಳಿಹಾಕಿತು.
ತಮ್ಮ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿದ ಅನುಮತಿ ಎತ್ತಿಹಿಡಿದಿರುವ ಹೈಕೋರ್ಟ್ ತೀರ್ವನವನ್ನು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ರಾಜ್ಯಪಾಲರ ಆದೇಶದಲ್ಲಿನ ಸೆಕ್ಷನ್ 17ಎ ಗೆ ಮಾತ್ರ ಸೀಮಿತಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿದೆ. ಹೀಗಾಗಿ ಈ ತೀರ್ಪು ತಮಗೆ ಅನ್ವಯವಾಗಲ್ಲ ಎಂಬುದಾಗಿ ಸಿಎಂ ಪರ ವಕೀಲರು ವಿಭಾಗೀಯ ಪೀಠದಲ್ಲಿ ವಾದಿಸಲಿದ್ದಾರೆ. ಇದಕ್ಕೆ ಪ್ರತಿಯಾಗಿ ದೂರುದಾರರಾದ ಸ್ನೇಹಮಯಿ ಕೃಷ್ಣ ಹಾಗೂ ಟಿ.ಜೆ.ಅಬ್ರಹಾಂ ಈಗಾಗಲೇ ಹೈಕೋರ್ಟ್ ದ್ವಿಸದಸ್ಯಪೀಠದಲ್ಲಿ ಪ್ರತ್ಯೇಕವಾಗಿ ಕೇವಿಯೆಟ್ ಹಾಕಿದ್ದಾರೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಪರ ಅರ್ಜಿ ಸಲ್ಲಿಕೆಯಾದರೆ ನಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಸಿಎಂ ಸುಪ್ರಿಂಕೋರ್ಟ್ ಕದ ತಟ್ಟಿದರೆ ಅಲ್ಲಿಯೂ ಕೂಡ ನಮ್ಮ ವಾದ ಆಲಿಸಬೇಕೆಂದು ಈ ಇಬ್ಬರು ದೂರುದಾರರು ಪ್ರತ್ಯೇಕವಾಗಿ ಕೇವಿಯೆಟ್ ದಾಖಲಿಸಿದ್ದಾರೆ.
ಖಾಸಗಿ ದೂರು ವಿಚಾರಣೆ: ಮುಡಾ ಹಗರಣ ಸಂಬಂಧ ಜನಪ್ರತಿನಿಧಿಗಳ ಕೋರ್ಟ್ನಲ್ಲಿರುವ ಖಾಸಗಿ ದೂರು ಬುಧವಾರ ವಿಚಾರಣೆಗೆ ಬರುತ್ತಿದೆ. ರಾಜ್ಯಪಾಲರು ನೀಡಿದ ಅಭಿಯೋಜನೆ ವಿಚಾರ ತೀರ್ಮಾನ ಆಗುವವರೆಗೂ ಜನಪ್ರತಿನಿಧಿಗಳ ನ್ಯಾಯಾಲಯ ಯಾವುದೇ ನಿರ್ಧಾರಕ್ಕೆ ಬರಬಾರದು ಎಂದು ಹೈಕೋರ್ಟ್ ಹೇಳಿತ್ತು, ಇದೀಗ ಆ ಸೂಚನೆ ಅವಧಿ ಮುಗಿದಿದೆ. ಹೀಗಾಗಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪ್ರಕ್ರಿಯೆ ಮುಂದುವರಿಸಲು ಅವಕಾಶ ಸಿಕ್ಕಂತಾಗಿದೆ.