ಪುದುಚೇರಿ ಕಾಂಗ್ರೆಸ್​ಗೆ ಶಾಕ್ ಕೊಟ್ಟ ಹೊಸ ರಾಜ್ಯಪಾಲರು

Tamilsai
Published on

ಪುದುಚೇರಿ: ದಿಡೀರ್ ರಾಜಕೀಯ ಬೆಳವಣಿಗೆಯಲ್ಲಿ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿಧಾನಸಭೆಯಲ್ಲಿ ಅಲ್ಪಮತಕ್ಕೆ ಕುಸಿದಿದೆ. ಇದರ ಬೆನ್ನಲ್ಲೇ ಇಂದು ಸಂಜೆ, ಉಸ್ತುವಾರಿ ರಾಜ್ಯಪಾಲ ತಮಿಳುಸಾಯಿ ಸೌಂದರ್ಯರಾಜನ್ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತಪಡಿಸುವಂತೆ ಕಾಂಗ್ರೆಸ್​ಗೆ ಸೂಚಿಸಿದ್ದಾರೆ.

ವಿಶ್ವಾಸಮತ ಸಾಭೀತಪಡಿಸಲು ರಾಜ್ಯಪಾಲರು ಫೆ 22 ರ ಸಂಜೆ 5 ಗಂಟೆಗೆ ಸಮಯ ನಿಗದಿ ಮಾಡಿದ್ದಾರೆ. ಕಾಂಗ್ರೆಸ್, ಡಿಎಂಕೆ 14 ಸ್ಥಾನಗಳನ್ನು ಹೊಂದಿದ್ದರೆ, ವಿರೋಧ ಪಕ್ಷಗಳು ಕೂಡ 14 ಸ್ಥಾನಗಳನ್ನು ಹೊಂದಿವೆ. ಒಬ್ಬ ಕಾಂಗ್ರೆಸ್ ಶಾಸಕ ಜಾನ್ ಕುಮಾರ್ ಸೇರಿದಂತೆ ಮೂವರು ನಾಮನಿರ್ದೇಶಿತ ಶಾಸಕರು ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾರೆ.

ಈ ಮೂಲಕ ಪುದುಚೇರಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಅಲ್ಪಮತಕ್ಕೆ ಕುಸಿದಿದೆ. ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತು ಮಾಡುವಂತೆ ರಾಜ್ಯಪಾಲರಿಗೆ ಬೇಡಿಕೆ ಸಲ್ಲಿಸಿದ್ದವು. ಕಿರಣ್ ಬೇಡಿ ಅವರನ್ನು ಹಿಂದಕ್ಕೆ ಕರೆಯಿಸಿಕೊಂಡ ನಂತರ ತಮಿಳುಸಾಯಿ ಸೌಂದರ್ಯರಾಜನ್ ಅವರಿಗೆ ಪುದುಚೇರಿ ಹೊಣೆ ಹೊರಿಸಲಾಗಿದೆ.

33 ಸದಸ್ಯ ಬಲದ ಪುದುಚೇರಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಡಿಎಂಕೆ ಮೈತ್ರಿಯ 17 ಶಾಸಕರು ಇದ್ದರೆ, (ನಾಮನಿರ್ದೇಶಿತರೂ ಸೇರಿದಂತೆ) ವಿರೋಧ ಪಕ್ಷದಲ್ಲಿರುವ ಬಿಜೆಪಿ, ಎಐಎಡಿಎಂಕೆ ಹಾಗೂ ಪಕ್ಷೇತರರ ಸಂಖ್ಯೆ 16 ಇದೆ. ಜಾನ್ ಕುಮಾರ್ ಅವರ ರಾಜೀನಾಮೆ ಸಲ್ಲಿಸುವ ಮೂಲಕ ಕಾಂಗ್ರೆಸ್​ಗೆ ಸಂಕಷ್ಟಕ್ಕೆ ಒಳಗಾಗಿದೆ. ಇದೀಗ ವಿಧಾನಸಭೆ ಬಲ 28 ಕ್ಕೆ ಕುಸಿದಿದೆ.

ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ಅವರಿಗೆ ಆಪ್ತರಾಗಿದ್ದ ಜಾನ್ ಕುಮಾರ್ ಅವರು ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಬೆಳವಣಿಗೆಯ ನಂತರ ಅವರು ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬರುವ ಮೇ ನಲ್ಲಿ ಪುದುಚೇರಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. (ಏಜೇನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net