2027 ರೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು ಹರಿಸುವುದು ಸರ್ಕಾರದ ಗುರಿ: DK ಶಿವಕುಮಾರ್

dk - 2025-06-21T130412.834
Published on

ಬೆಂಗಳೂರು: 2027ರ ಒಳಗಾಗಿ ಕೋಲಾರ ಭಾಗಕ್ಕೆ ಎತ್ತಿನ ಹೊಳೆ ನೀರನ್ನು ಹರಿಸಬೇಕು ಎಂಬುದು ನಮ್ಮ ಸರ್ಕಾರದ ಸಂಕಲ್ಪ ಎಂದು ಡಿಸಿಎಂ DK ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರ ಜತೆ ಶನಿವಾರ ಮಾತನಾಡಿದರು. ಈ ಯೋಜನೆಗೆ ಅರಣ್ಯ ಇಲಾಖೆಗೆ ಸಂಬಂಧಿತ ಸಮಸ್ಯೆಗಳು, ಭೂ ಸ್ವಾಧೀನ ಪ್ರಕ್ರಿಯೆ, ಬೈರಗೊಂಡಲು, ಲಕ್ಕೇನಹಳ್ಳಿಯಲ್ಲಿ ಸಮತೋಲಿತ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದ ಭೂ ಸ್ವಾಧೀನ ಹಾಗೂ ಆರ್ಥಿಕ ವಿಚಾರವಾಗಿ ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ. ಹೀಗಾಗಿ ಈ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ ಎಂದು ತಿಳಿಸಿದರು.

ಈ ಯೋಜನೆಯಲ್ಲಿ ಮಾರ್ಪಾಟು ಮಾಡಿರುವ ಅಂಶಗಳು, ಸಚಿವರುಗಳ ಸಲಹೆಗಳನ್ನು ನೀಡಿದ್ದಾರೆ. ಇಲ್ಲಿ ಕೆಲವು ತಾಂತ್ರಿಕ ಅಂಶಗಳು ಕೂಡ ಇವೆ. ಎಲ್ಲವನ್ನು ಅಧ್ಯಯನ ಮಾಡಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ. ಬೇರೆ ಯೋಜನೆಗಳು ವಿಳಂಬವಾದರೂ ಚಿಂತೆಯಿಲ್ಲ, ಎತ್ತಿನಹೊಳೆ ಯೋಜನೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವಂತೆ ಸಿಎಂ ನನಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.

ಶಾಸಕರ ಹೇಳಿಕೆ ಖಂಡಿಸುತ್ತೇನೆ

ಶಾಸಕ ಬಿ.ಆರ್ ಪಾಟೀಲ್ ಅವರು ಆಡಿಯೋದಲ್ಲಿ ಮಾಡಿರುವ ಆರೋಪ ನಿಜ ಎಂದು ಪುನರುಚ್ಚರಿಸಿದ್ದಾರೆ ಎಂದು ಕೇಳಿದಾಗ, "ಅವರು ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ. ಈ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಅವರು ಈ ವಿಚಾರವಾಗಿ ಕ್ರಮ ಕೈಗೊಳ್ಳಲಿದ್ದಾರೆ. ಪಾರದರ್ಶಕವಾಗಿ ವಸತಿ ಹಂಚಿಕೆಯಾಗುವಾಗ ಫಲಾನುಭವಿ ಹಣ ನೀಡಲು ಹೇಗೆ ಸಾಧ್ಯ? ವಸತಿ ಹಂಚುವ ನಿರ್ಧಾರ ತೆಗೆದುಕೊಳ್ಳುವವರು ಪಂಚಾಯ್ತಿ ಹಾಗೂ ಸ್ಥಳೀಯ ಸಂಸ್ಥೆಗಳು. ಶಾಸಕರು ಯಾವ ಉದ್ದೇಶದಲ್ಲಿ ಹೇಳಿದ್ದಾರೋ ಇದು ಸರಿ ಇಲ್ಲ. ನಾನಿದನ್ನು ಖಂಡಿಸುತ್ತೇನೆ. ನಮ್ಮ ಸರ್ಕಾರದಲ್ಲಿ ಇಂತಹ ವಿಚಾರ ಇಲ್ಲ. ಈ ವಿಚಾರವಾಗಿ ನಾನು ಹಾಗೂ ಸಿಎಂ, ಶಾಸಕರ ಜೊತೆ ಮಾತನಾಡುತ್ತೇವೆ" ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net