ಅನುದಾನ ಬಿಡುಗಡೆ ಸರ್ಕಾರದ ವಿವೇಚನಾಧಿಕಾರ: ಹೈಕೋರ್ಟ್ ಅಭಿಪ್ರಾಯ

highcourt
Published on

ಬೆಂಗಳೂರು: ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 2019ರಲ್ಲಿ ಮಂಜೂರು ಆದ ಅನುದಾನದಲ್ಲಿ ಬಾಕಿ ಇರುವ 78 ಕೋಟಿ ರೂ. ಶೀಘ್ರ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ವಿಚಾರವಾಗಿ ಶಾಸಕ ಎಸ್. ಮುನಿರಾಜು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ ಅವರ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ 2019ರಲ್ಲಿ 570 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿತ್ತು. ನಂತರ ಅದನ್ನು ರದ್ದುಪಡಿಸಲಾಯಿತು. ಅನುದಾನ ಮರುನಿಗದಿಪಡಿಸಿ 110 ಕೋಟಿ ರೂ. ನೀಡಲಾಯಿತು. ಅದರಲ್ಲಿ ಕೇವಲ 32 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇನ್ನೂ 78 ಕೋಟಿ ರೂ. ಬಾಕಿ ಇದೆ.

ಈ ಅನುದಾನ ಬಿಡುಗಡೆ ಮಾಡುವಂತೆ ಆರು ಬಾರಿ ಮನವಿ ಸಲ್ಲಿಸಲಾಗಿದೆ. ಅನುದಾನ ಇಲ್ಲದೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಮುಂದೆ ಸಾಗುತ್ತಿಲ್ಲ. ರಸ್ತೆಗಳು ಹದಗೆಟ್ಟಿವೆ, ಶಿಥಿಲಾವಸ್ಥೆಯ ಕಟ್ಟಡಗಳನ್ನು ತೆರವುಗೊಳಿಸಬೇಕಾಗಿದೆ. ಟೆಂಡರ್ ಕರೆದ ಕಾಮಗಾರಿಗಳಿಗೆ ಹಣ ಇಲ್ಲ. ಹೊಸದಾಗಿ ಟೆಂಡರ್ ಕರೆಯುವುದಕ್ಕೂ ಅನುದಾನದ ಕೊರತೆ ಇದೆ. ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿ ಪರಿಹಾರ ಸಿಗದ ಹಿನ್ನೆಲೆ ಹೈಕೋರ್ಟ್ ಮೆಟ್ಟಿಲೇರಿಬೇಕಾಗಿದೆ ಎಂದರು.

ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಪರ ವಕೀಲರು ಅನುದಾನ ಬಿಡುಗಡೆ ಆಗದಿರುವುದು. ಆದ್ದರಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡು ಕ್ಷೇತ್ರದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದಾರೆ. ಆದರೆ, ಯೋಜನೆಗಳನ್ನು ರೂಪಿಸುವುದು, ಅದಕ್ಕೆ ಅನುಮೋದನೆ ನೀಡುವುದು, ಅಗತ್ಯ ಅನುದಾನ ಬಿಡುಗಡೆ ಮಾಡುವುದು, ಅನುದಾನ ರದ್ದುಪಡಿಸುವುದು, ತಡೆ ಹಿಡಿಯುವುದು, ಮಾರ್ಪಾಡು ಮಾಡುವುದು ಚುನಾಯಿತ ಸರ್ಕಾರದ ವಿವೇಚನಾಧಿಕಾರವಾಗಿರುತ್ತದೆ. ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಪ್ರಶ್ನಿಸುವುದು ಸೂಕ್ತವಲ್ಲ. ಮೇಲಾಗಿ ಅರ್ಜಿದಾರರು ಸ್ವತಃ ಶಾಸಕರಾಗಿದ್ದು, ಶಾಸನ ಸಭೆಯಲ್ಲಿ ಈ ವಿಷಯ ಎತ್ತಬಹುದು ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net