

ಕರೊನಾ ಸೋಂಕು ಯಾವುದೇ ಧರ್ಮ, ಪಂಗಡ ನೋಡಿ ಬರುವಂಥದ್ದಲ್ಲ. ಯಾರು ಬೇಕಿದ್ದರೂ ಸೋಂಕಿಗೆ ಒಳಗಾಗಿ, ರೋಗಿಗಳಾಗಬಹುದು. ಮತ್ತು ಈ ಸೋಂಕಿನ ವಾಹಕರು ಮನುಷ್ಯರೇ ಆಗಿರುವುದರಿಂದ ಕರೊನಾ ನಿಯಂತ್ರಣ ಬಹುದೊಡ್ಡ ಸವಾಲು ಆಗಿ ಹೊಮ್ಮಿದೆ. ಹೀಗಿರುವಾಗಲೂ, ವೈದ್ಯರು, ಶುಶ್ರೂಷಕರು, ಆಂಬುಲೆನ್ಸ್ ಚಾಲಕರು, ಆಶಾ ಕಾರ್ಯಕರ್ತೆಯರು ಸೇರಿ ಆರೋಗ್ಯ ಇಲಾಖೆಯ ಸಿಬ್ಬಂದಿ ಜೀವವನ್ನೇ ಪಣಕ್ಕಿಟ್ಟು ರೋಗಿಗಳು ಗುಣಮುಖರಾಗಲು ಶ್ರಮಿಸುತ್ತಿದ್ದಾರೆ. ಈ ಪೈಕಿ ಎಷ್ಟೋ ಜನರಿಗೆ ವಾರಗಟ್ಟಲೇ ಮನೆಗಳಿಗೆ ಹೋಗಲು, ಕುಟುಂಬದವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಆದರೂ, ಅವರೆಲ್ಲ ಎದೆಗುಂದದೆ ಈ ಸಂಕಷ್ಟದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿದ್ದಾರೆ. ಹಾಗಾಗಿ, ಆರೋಗ್ಯ ಸೇನಾನಿಗಳಿಗೆ ಸಮಾಜ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ದುರದೃಷ್ಟವಶಾತ್, ದೇಶ ಮತ್ತು ರಾಜ್ಯದ ಹಲವೆಡೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆಯೇ ಪುಂಡರು ಹಲ್ಲೆ ನಡೆಸುವಂಥ ಘಟನೆಗಳು ಹೆಚ್ಚುತ್ತಿವೆ. ಇದು ಜನರಲ್ಲಿ ಆತಂಕ ಸೃಷ್ಟಿಸುವ ಜತೆಗೆ, ವೈದ್ಯಲೋಕದ ಮನೋಸ್ಥೈರ್ಯವನ್ನೂ ಕುಗ್ಗಿಸುತ್ತಿದೆ.
ಉತ್ತರಪ್ರದೇಶ, ಕೇರಳದಂಥ ರಾಜ್ಯಗಳು ಇದರ ವಿರುದ್ಧ ಪ್ರಬಲ ಹೆಜ್ಜೆಯನ್ನು ಇರಿಸಿದ್ದು, ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿವೆ. ಈಗ ಇದೇ ಮಾದರಿ ಅನುಸರಿಸಲು ಕರ್ನಾಟಕ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ‘ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ’ಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟಸಭೆಯಲ್ಲಿ ನಿರ್ಣಯಿಸಲಾಗಿದೆ. ಇದು ತುಂಬ ಅವಶ್ಯಕವಾದ, ಅನಿವಾರ್ಯವಾದ ಕ್ರಮವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಈ ಕಾಯ್ದೆ ಪ್ರಕಾರ ಆರೋಗ್ಯ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಲಾಗುತ್ತದೆ ಮತ್ತು ಆರೋಪಿಗಳಿಗೆ ಜಾಮೀನು ಕೂಡ ಸಿಗುವುದಿಲ್ಲ. ಹಾಗಾಗಿ, ಸಾಮಾಜಿಕ ಸ್ವಾಸ್ಥ್ಯವನ್ನು ಬಿಗಡಾಯಿಸುತ್ತಿರುವವರ ವಿರುದ್ಧ ಸರ್ಕಾರ ಪ್ರಬಲ ಅಸ್ತ್ರವೊಂದು ತರಲು ಹೊರಟಿದ್ದು, ಆರೋಗ್ಯ ಕಾರ್ಯಕರ್ತರ ಹಿತದೃಷ್ಟಿಯಿಂದ ತುಂಬ ಮುಖ್ಯವಾದದ್ದು.
ಭಾನುವಾರ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪುಂಡರ ಗುಂಪು ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರನ್ನು ಅಟ್ಟಾಡಿಸಿಕೊಂಡು ಬಂದು ಹಲ್ಲೆಗೆ ಯತ್ನಿಸಿದೆ. ಕಾನೂನು ಕೈಗೆತ್ತಿಕೊಂಡ ಹಲವರನ್ನು ಬಂಧಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ಆದ್ಯತೆ ನೀಡಲಾಗಿದೆ. ಈ ಹಿಂದೆಯೂ ಮಾಹಿತಿ ಸಂಗ್ರಹಕ್ಕೆಂದು ಹೋದ ಆಶಾ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಘಟನೆಗಳು ಚಿಂತೆಗೆ ಕಾರಣವಾಗುವ ಜತೆಗೆ, ಇವಕ್ಕೆಲ್ಲ ಕೊನೆ ಹೇಗೆ ಎಂಬ ಪ್ರಶ್ನೆ ಹುಟ್ಟುಹಾಕಿದ್ದವು. ಇಡೀ ದೇಶ ಸೋಂಕಿನ ವಿರುದ್ಧ ಹೋರಾಡುತ್ತಿರುವಾಗ ಕೆಲ ಕಿಡಿಗೇಡಿಗಳು ಪರಿಸ್ಥಿತಿ ಬಿಗಡಾಯಿಸಲು ಯತ್ನಿಸುತ್ತಿರುವುದು ಅಕ್ಷಮ್ಯ. ಕೆಲ ಸಂದರ್ಭಗಳಲ್ಲಿ ಸರ್ಕಾರ ಕಠೋರ ಮತ್ತು ಮುಲಾಜಿಲ್ಲದ ನಿರ್ಣಯಗಳನ್ನು ತಳೆಯಲೇ ಬೇಕಾಗುತ್ತದೆ. ರಾಜ್ಯ ಸರ್ಕಾರ ಕೂಡ ಇದೇ ಸಂದೇಶ ನೀಡುತ್ತ ಆರೋಗ್ಯ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಸಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮುಂದಿನ ದಿನಗಳಲ್ಲಿ ಹೊಸ ಕಾಯ್ದೆಯ ಬಲದಿಂದ ತಪು್ಪ ಮಾಡಿದವರಿಗೆ ಶಾಸ್ತಿಯಾಗಲಿ, ಹಲ್ಲೆಗಳು ನಿಲ್ಲಲಿ.