ಶಾಲೆ ಮುಚ್ಚಲ್ಲ, ಭಯ ಬೇಕಿಲ್ಲ: 1-10ನೇ ತರಗತಿ ಮಕ್ಕಳಲ್ಲಿ ಸೋಂಕು ಕಂಡಿಲ್ಲ, ಸಚಿವ ನಾಗೇಶ್ ಸ್ಪಷ್ಟನೆ

School
ಗುರುವಾರ ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ಸಾಲು ನಿಂತ ಪ್ರಯಾಣಿಕರು.
Published on

ಬೆಂಗಳೂರು: ರಾಜ್ಯದಲ್ಲಿ ಕಡಿಮೆ ಸೋಂಕು ಇರುವುದರಿಂದ ಯಾವುದೇ ಶಾಲೆ ಮುಚ್ಚುವುದಿಲ್ಲ. ದ್ವಿತೀಯ ಪಿಯು ಮಕ್ಕಳಿಗೆ ಮಧ್ಯಂತರ ಪರೀಕ್ಷೆ ನಡೆಯುತ್ತಿದೆ. ಕಳೆದ ಎರಡು ವರ್ಷ ಪರೀಕ್ಷೆ ಆಗಿಲ್ಲ. ಈ ಬಾರಿ ಪಿಯು ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಅವರು ಕಳೆದ ಎರಡು ದಿನಗಳಿಂದ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖ ಆಗಿದೆ. ಶಾಲೆಗಳಲ್ಲಿ ಸಹ 1ರಿಂದ 10 ತರಗತಿಯಲ್ಲೂ ಕೋವಿಡ್ ಸೋಂಕು ಕಂಡು ಬಂದಿಲ್ಲ ಎಂದು ತಿಳಿಸಿದರು. ಶಿಕ್ಷಕರು ಸೇರಿ ಒಟ್ಟು ಈವರೆಗೂ 172 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಪಿಯು ಕಾಲೇಜಿನಲ್ಲಿ ಮಾತ್ರ ಕಂಡು ಬಂದಿದೆ. ಇದರಲ್ಲಿ ನೂರು ಮಕ್ಕಳು ಈಗಾಗಲೇ ರಿಕವರಿ ಆಗಿದ್ದಾರೆ. ಕೋವಿಡ್ ಬಂದ ಮಕ್ಕಳು ಆರೋಗ್ಯವಾಗಿದ್ದಾರೆ. ಮತ್ತೆ ಕಾಲೇಜು ಆರಂಭವಾಗಿದೆ ಎಂದು ಹೇಳಿದರು.

ಎಂಟು ವಸತಿ ಶಾಲೆಗಳಲ್ಲಿ ಕೋವಿಡ್ ಹೆಚ್ಚಾಗಿತ್ತು. ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಸಮಿತಿ ಮಾಡಿ ಹಾಸ್ಟೆಲ್ ಮತ್ತು ಶಾಲೆಗಳಿಗೆ ತೆರಳಿ ತಪಾಸಣೆ ಮಾಡಲು ಹೇಳಿದ್ದೇವೆ ಎಂದು ಹೇಳಿದ ಅವರು ಶಾಲೆ ಮುಚ್ಚುವುದಿಲ್ಲ. ಈ ಹಿಂದೆ ಇದ್ದ ಎಸ್​ಓಪಿಯೇ ಮುಂದುವರೆಯುತ್ತದೆ ಎಂದರು.

ವಸತಿ ಶಾಲೆಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಅದನ್ನು ಮಾನಿಟರಿಂಗ್ ಮಾಡಲಾಗುತ್ತಿದೆ. ಬಿಇಓ ಮತ್ತು ಟಿಎಚ್​ಓ ಸಮಿತಿ ನೇತೃತ್ವದಲ್ಲಿ ತಪಾಸಣೆ ಮಾಡಲು ಸೂಚಿಸಲಾಗಿದೆ ಎಂದ ಅವರು ಹಾಸ್ಟೆಲ್​ಗಳಲ್ಲಿ ಒಟ್ಟಿಗೆ ಊಟಕ್ಕೆ ಹೋಗಬಾರದು. ದೂರ ದೂರದಲ್ಲಿ ಕೂತು ಊಟ ಮಾಡಬೇಕು. ಸ್ನಾನ ಮಾಡುವಾಗ ಒಟ್ಟಿಗೆ ಹೋಗಬಾರದು. ಮಲಗುವಾಗಲೂ ಸಾಧ್ಯವಾದಷ್ಟು ದೂರ ಮಲಗಲು ಸೂಚಿಸಲಾಗಿದೆ. ಆದರೆ ಪಾಲಕರು ಎರಡು ಡೋಸ್ ವ್ಯಾಕ್ಸಿನ್ ಪಡೆಯುವುದು ಕಡ್ಡಾಯ ಮಾಡಿಲ್ಲ. ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಕಾನೂನಿನಲ್ಲಿ ಇಲ್ಲ. ಎಲ್ಲರೂ ಎರಡು ಡೋಸ್ ಪಡೆಯಿರಿ ಎಂದು ಮನವಿ ಮಾಡಿಕೊಳ್ಳಲಾಗುವುದು ಅಷ್ಟೆ ಎಂದರು.

7,332 ಸಕ್ರಿಯ ಪ್ರಕರಣ: ಕೋವಿಡ್ ಸಂಭಾವ್ಯ ಮೂರನೇ ಅಲೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದ್ದು, ಗುರುವಾರ 1.18 ಲಕ್ಷ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. 373 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7,332ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ದಿನದ ಸೋಂಕು ಪ್ರಮಾಣ ದರ ಶೇ.0.31 ತಲುಪಿದ್ದು, ಈವರೆಗೂ 29.99 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸೋಂಕಿತರಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮೃತರ ಒಟ್ಟು ಸಂಖ್ಯೆ 38,253ಕ್ಕೆ ಏರಿಕೆಯಾಗಿದೆ. 292 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 29.53 ಲಕ್ಷ ಮೀರಿದೆ. ಬೆಂಗಳೂರು ನಗರ 211 (4 ಸಾವು), ಕೊಡಗು 21, ಮೈಸೂರು 18, ಹಾಸನ 12, ದಕ್ಷಿಣ ಕನ್ನಡ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ 11 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 12 ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಒಂದಂಕಿ ತಲುಪಿದ್ದು, 11 ಜಿಲ್ಲೆಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. 29 ಜಿಲ್ಲೆಗಳಲ್ಲಿ ಕೋವಿಡ್​ನಿಂದ ಯಾವುದೇ ಸಾವು ವರದಿಯಾಗಿಲ್ಲ.

ಲಂಡನ್​ನಿಂದ ಬಂದ ಯುವಕನಿಗೆ ಕರೊನಾ

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿ.9ಂದು ಮಧ್ಯಾಹ್ನ ಲಂಡನ್​ನಿಂದ ಆಗಮಿಸಿದ 18 ವರ್ಷದ ಯುವಕನಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ನವೆಂಬರ್​ನಿಂದ ಡಿ.9ರವರಗೆ ನಡೆಸಿದ ಪ್ರಯಾಣಿಕ ಕೋವಿಡ್ ಟೆಸ್ಟ್​ನಲ್ಲಿ ಇದುವರೆಗೆ 5 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರಲ್ಲಿ ಇಬ್ಬರಿಗೆ ಡೆಲ್ಟಾ ಹಾಗೂ ಓರ್ವ ಪ್ರಯಾಣಿಕನಿಗೆ ಒಮಿಕ್ರಾನ್ ದೃಢಪಟ್ಟಿದೆ. ಉಳಿದ ಇಬ್ಬರು ಸೋಂಕಿತರ ತಪಾಸಣೆ ವರದಿ ಬರಬೇಕಿದ್ದು, ಯಾವ ಬಗೆಯ ಸೋಂಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ, ಸೋಂಕಿತರು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಮಿಕ್ರಾನ್ ಸೋಂಕಿತರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ: ಕೋವಿಡ್ ವೈರಾಣುವಿನ ರೂಪಾಂತರಿ ತಳಿ ಒಮಿಕ್ರಾನ್ ಸೋಂಕಿಗೆ ಒಳಗಾದವರನ್ನು ಹತ್ತು ದಿನ ಆಸ್ಪತ್ರೆಗಳಲ್ಲಿಯೇ ಪ್ರತ್ಯೇಕಿಸಿ, ಚಿಕಿತ್ಸೆ ನೀಡಬೇಕು ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಒಮಿಕ್ರಾನ್ ಸೋಂಕು ನಿಯಂತ್ರಣ ಸಂಬಂಧ ಸರ್ಕಾರ ರಚಿಸಿದ್ದ ಕ್ಲಿನಿಕಲ್ ತಜ್ಞರ ಸಮಿತಿಯು ಬುಧವಾರ ಮೊದಲ ಸಭೆ ನಡೆಸಿ, ಒಮಿಕ್ರಾನ್ ಸೋಂಕು ಹೊಂದಿದವರ ಸಂಖ್ಯೆ ಹೆಚ್ಚಳವಾದಲ್ಲಿ ಪರಿಸ್ಥಿತಿ ಎದುರಿಸಲು ಹಾಸಿಗೆಗಳ ವ್ಯವಸ್ಥೆ ಮಾಡುವ ಬಗ್ಗೆಯೂ ಚರ್ಚೆ ನಡೆಸಿದರು.

ದಕ್ಷಿಣ ಆಫ್ರಿಕಾದಲ್ಲಿ ಮಕ್ಕಳಿಗೂ ಈ ತಳಿಯ ಸೋಂಕು ಹರಡಿರುವುದರಿಂದ ಮನೆ ಆರೈಕೆಗೆ ಅವಕಾಶ ನೀಡಬಾರದು ಎಂದಿರುವ ತಜ್ಞರು ಸಮಿತಿ ಸೋಂಕಿತರ ಚಿಕಿತ್ಸಾ ವಿಧಾನ ಕುರಿತು ವಿಸõತ ವರದಿಯನ್ನು ಸಿದ್ಧಪಡಿಸಿ ಗುರುವಾರ ಸರ್ಕಾರಕ್ಕೆ ಸಲ್ಲಿಸಿತು. ಹತ್ತು ದಿನಗಳ ಕಾಲ ಆಸ್ಪತ್ರೆ ವಾಸ ಮುಗಿಸಿ ಮನೆಗೆ ತೆರಳಿದ ನಂತರವೂ ಆರು ದಿನಗಳ ಕಾಲ ಪ್ರತ್ಯೇಕ ವಾಸದಲ್ಲಿರುಬೇಕು. ಆರನೇ ದಿನ ಪುನಃ ಆರ್​ಟಿಪಿಸಿಆರ್ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬಂದ ನಂತರವಷ್ಟೇ ಹೊರಗೆ ಹೋಗಲು ಅನುಮತಿ ನೀಡಬೇಕು. ಈ ಅವಧಿಯಲ್ಲಿ ಆರೋಗ್ಯ ಕಾರ್ಯಕರ್ತರು ದೂರವಾಣಿ ಮೂಲಕ ಇಲ್ಲವೆ ಮನೆ ಭೇಟಿ ಮಾಡಿ ರೋಗಿಯ ಆರೋಗ್ಯ ವಿಚಾರಿಸಬೇಕು.

ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ: ಒಮಿಕ್ರಾನ್ ಸೋಂಕಿತರಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್​ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ಸೋಂಕಿತರು ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯಲು ಇಚ್ಚಿಸದವರು ಗುರುತಿಸಲ್ಪಟ್ಟ ಖಾಸಗಿ ಆಸ್ಪತ್ರೆಯಲ್ಲಿ ಸ್ವಯಂ ಖರ್ಚಿನಲ್ಲಿ ಚಿಕಿತ್ಸೆ ಪಡೆಯಲು ಅನುಮತಿಸಬಹುದಾಗಿದೆ.

ಒಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತದೆ. ಹಾಗೂ ಲಸಿಕೆ ಪಡೆದವರಲ್ಲಿ ತೀವ್ರತೆ ಕಡಿಮೆ ಇರುತ್ತದೆ ಎಂಬುದು ಸದ್ಯ ಗಮನಕ್ಕೆ ಬಂದಿರುವ ವಿಷಯ. ಈ ಕುರಿತು ಇನ್ನೂ ಅಧ್ಯಯನ ನಡೆಯುತ್ತಿದೆ. ಹಾಗಾಗಿ ಸೋಂಕು ಹರಡುವುದನ್ನು ತಡೆಯಲು ಒಮಿಕ್ರಾನ್ ಸೋಂಕಿತರಿಗೆ ಮನೆ ವಾಸ ಹಾಗೂ ಕೋವಿಡ್ ಕೇರ್ ಸೆಂಟರ್ ಬದಲಿಗೆ ಕಡ್ಡಾಯ ಆಸ್ಪತ್ರೆ ಚಿಕಿತ್ಸೆ ಸೂಚಿಸಲಾಗಿದೆ.| ಡಾ. ಎಂ.ಕೆ. ಸುದರ್ಶನ್ ಅಧ್ಯಕ್ಷರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net