

ಬೆಂಗಳೂರು: ಬಿಜೆಪಿ ಚಾರ್ಜ್‌ಶೀಟ್ ವಿರುದ್ಧ ಕೋರ್ಟ್‌ನಲ್ಲಿ ಮಾನನಷ್ಟ ದಾವೆ ಹೂಡುವ ಸರ್ಕಾರದ ನಿರ್ಧಾರವು ಆಡಳಿತ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಮಧ್ಯೆ ವಾದ-ಪ್ರತಿವಾದ ಕಾವೇರಿದೆ.
ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸುವ ಪ್ರಯತ್ನಗಳನ್ನು ಸರ್ಕಾರ ಮೂಕಪ್ರೇಕ್ಷಕನ ರೀತಿಯಲ್ಲಿ ನೋಡುತ್ತಾ ಇರಲಾಗದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಸಮರ್ಥಿಸಿಕೊಂಡರು.
ಕೇಸ್ ಹಾಕುತ್ತೇವೆ ಎಂದು ಹೆದರಿಸಿ ಬಾಯ್ಮುಚ್ಚಿಸುವ ತಂತ್ರ ಲಿಸುವುದಿಲ್ಲ. ಬಿಡುಗಡೆ ಮಾಡಿದ ಚಾರ್ಜ್ ಶೀಟ್‌ನಿಂದ ಆಡಳಿತ ಕಾಂಗ್ರೆಸ್ ಪಕ್ಷ ದಿಗಿಲುಗೊಂಡಿದೆ. ಸೇಡಿನ ರಾಜಕಾರಣಕ್ಕೆ ಇಳಿದಿದೆ ಎಂದು ಬಿಜೆಪಿ ನಾಯಕರು ಚಾಟಿ ಬೀಸಿದ್ದಾರೆ.
ಸಚಿವ ಎಚ್.ಕೆ.ಪಾಟೀಲ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ ಸರ್ಕಾರದ ಕಾರ್ಯಶೈಲಿ ಟೀಕೆ-ಟಿಪ್ಪಣಿ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಪ್ರತಿಪಕ್ಷ ತನ್ನ ಜವಾಬ್ದಾರಿ ಮರೆತು ಸುಳ್ಳು, ತಿರುಚಿದ ಹಾಗೂ ತಪ್ಪು ಮಾಹಿತಿ ನೀಡುವುದನ್ನು ಸರ್ಕಾರ ಸಹಿಸಿಕೊಳ್ಳುವುದಿಲ್ಲ ಎಂದರು.
ಮಾನನಷ್ಟದ ಮೌಲ್ಯ ಎಷ್ಟೆಂಬುದು ಸೂಕ್ತ ಸಮಯ, ಸಂದರ್ಭ ಹಾಗೂ ವೇದಿಕೆಯಲ್ಲಿ ಸರ್ಕಾರ ತಿಳಿಸಲಿದೆ ಎಂದ ಎಚ್.ಕೆ.ಪಾಟೀಲ, ಪ್ರತಿಪಕ್ಷದ ಆರೋಪಗಳಿಂದ ಸರ್ಕಾರಕ್ಕೆ ಮಾನಹಾನಿಯಾದ ಸರ್ಕಾರವೇ ಮಾನನಷ್ಟ ಮೊಕದ್ದಮೆ ಹೂಡುತ್ತಿದೆ ಎಂದು ಸಮಜಾಯಿಷಿ ನೀಡಿದರು.
ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ವಿರುದ್ಧ ಪ್ರತಿಪಕ್ಷವಾಗಿ ಕಾಂಗ್ರೆಸ್ ಆರೋಪಗಳನ್ನು ಮಾಡಿತ್ತು. ಅಂದಿನ ಸರ್ಕಾರ ಮಾನನಷ್ಟ ದಾವೆ ಹೂಡುವುದಕ್ಕೆ ಯಾರದೇ ಅಭ್ಯಂತರವಿದ್ದಿಲ್ಲ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಸರ್ಕಾರದ ಪರವಾದ ವ್ಯಾಜ್ಯಗಳಲ್ಲಿ ವಾದ ಮಂಡಿಸಿದ್ದಲ್ಲಿ ವಕಾಲತ್ತು ಶುಲ್ಕ ಸರ್ಕಾರದಿಂದ ಪಾವತಿ ಮಾಡಬೇಕಾಗುತ್ತದೆ. ವೈಯಕ್ತಿಕ ಪ್ರಕರಣದಲ್ಲಿ ವಕಾಲತ್ತು ಮಾಡಿದವರಿಗೆ ಸರ್ಕಾರ ಶುಲ್ಕ ಭರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಳ್ಳಿಹಾಕಿದರು.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ, ಸಿಬಿಐ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪರ ವಕಾಲತ್ತು ಶುಲ್ಕ ಪಾವತಿ ಕೋರಿದ ಬಿಲ್‌ಗಳು ಕಾನೂನು ಇಲಾಖೆಗೆ ಸಲ್ಲಿಕೆಯಾಗಿಲ್ಲವೆಂದು ಸಚಿವ ಎಚ್.ಕೆ.ಪಾಟೀಲ ಸ್ಪಷ್ಟಪಡಿಸಿದರು.