ಐದನೇ ತಾರೀಕಿನೊಳಗೆ ವೇತನಕ್ಕೆ ಕ್ರಮ ಸ್ವಾಗತಾರ್ಹ

23-KGL-1,,,, (,,,
ಎನ್.ಮಹೇಶ್
Published on

ಕೊಳ್ಳೇಗಾಲ: ಗ್ರಾಮ ಪಂಚಾಯಿತಿ ಡಿ ಗ್ರೂಪ್ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಕಿನ ಒಳಗಡೆ ಸಂಬಳ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶಿಸಿರುವುದು ಸ್ವಾಗತರ್ಹ ಎಂದು ಶಾಸಕ ಎನ್.ಮಹೇಶ್ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳು ಸಂಬಳ ಆಗದಿದ್ದ ಕಾರಣಕ್ಕೆ ಹೊಂಗನೂರು ಗ್ರಾಪಂ ನೀರಗಂಟಿ ಚಿಕ್ಕೂಸನಾಯಕ ಆತ್ಮಹತ್ಯೆ ಮಾಡಿಕೊಂಡರು. ಕಲಬುರುಗಿ ಜಿಲ್ಲೆ ಮುಳಖೇಡದ ಗ್ರಾಪಂ ಗ್ರಂಥಪಾಲಕಿ ಭಾಗ್ಯವತಿ ಎಂಬುವರಿಗೆ ಮೂರು ತಿಂಗಳಿನಿಂದ ಸಂಬಳ ನೀಡದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸರ್ಕಾರಕ್ಕೆ ಎಚ್ಚರವಾಗಿದೆ. ಇದೀಗ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಸಂಬಳ ನೀಡುವ ಆದೇಶವನ್ನು ನೀಡಿದೆ. ಆದರೆ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ನನಗೆ ಅನಿಸುತ್ತಿಲ್ಲ ಎಂದರು.

ರಾಜ್ಯದಲ್ಲಿರುವ 5,900 ಗ್ರಾಪಂಗಳಲ್ಲಿ 63 ಸಾವಿರ ಗ್ರೂಪ್ ಡಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಪಂಚಾಯಿತಿ ಪಿಡಿಒ, ಕಾರ್ಯದರ್ಶಿ, ಎಸ್‌ಡಿಎ ಸರ್ಕಾರಿ ನೌಕರರಾಗಿರುತ್ತಾರೆ. ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ವಾಟರ್‌ಮೆನ್, ಅಟೆಂಡರ್, ಸ್ವೀಪರ್ಸ್ ಮತ್ತು ಕೆಲವು ಕಡೆಗಳಲ್ಲಿ ಎಲೆಕ್ಟ್ರಿಷಿಯನ್ಸ್ ಸರ್ಕಾರಿ ನೌಕರರಲ್ಲ. ಇವರೆಲ್ಲರೂ ಪಂಚಾಯಿತಿ ನೌಕರರಾಗಿರುತ್ತಾರೆ ಅಷ್ಟೇ. ಈ 63 ಸಾವಿರ ಪಂಚಾಯಿತಿ ಡಿ ಗ್ರೂಪ್ ನೌಕರರಲ್ಲಿ 38 ಸಾವಿರ ನೌಕರರನ್ನು ಸರ್ಕಾರ ಅನುಮೋದನೆ ಮಾಡಿಕೊಂಡು ಕನಿಷ್ಠ ವೇತನ ನೀಡುತ್ತಿದೆ. ಇನ್ನುಳಿದ ಸುಮಾರು 28 ಸಾವಿರ ನೌಕರರು ಸರ್ಕಾರದಿಂದ ಅನುಮೋದನೆಗೊಳ್ಳದ ಕಾರಣ 5-8 ಸಾವಿರ ರೂ.ಗೆ ಕೆಲಸ ಮಾಡುತ್ತಿದ್ದಾರೆ. ಈ ಗ್ರಾಪಂ ನೌಕರರ ಸೇವೆ ಬಹಳ ಅತ್ಯಗತ್ಯದ ಸೇವೆಯನ್ನು ನೀಡುತ್ತಾರೆ. ಹಾಗಾಗಿ ಇವರೆಲ್ಲರನ್ನು ಸರ್ಕಾರ ಕಾಯಂ ನೌಕರರನ್ನಾಗಿ ಮಾಡಿ, ಕನಿಷ್ಠ ವೇತನ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ನಾಗರಿಕರ ಕೆಲಸಗಳು ಸುಲಲಿತವಾಗಿ ನಡೆಯಬೇಕೆಂದರೆ ಮತ್ತು ನೌಕರರ ಮೇಲೆ ಜವಾಬ್ದಾರಿ ಹೇರಬೇಕೆಂದರೆ ಅವರೆಲ್ಲರೂ ಸರ್ಕಾರದ ಭದ್ರತೆಗೆ ಒಳಪಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net