

ಬೆಂಗಳೂರು: ಒಂದು ಆಂಬುಲೆನ್ಸ್ ನೀಡಲು ಕೈಲಾಗದ ದುಸ್ಥಿತಿ ರಾಜ್ಯ ಆರೋಗ್ಯ ಇಲಾಖೆಗೆ ಬಂದಿದೆಯೇ ಎಂದು ಜೆಡಿಎಸ್ ಆಕ್ರೊಶ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬದುಕಿದೆಯೆ ಅಥವಾ ಸತ್ತಿದೆಯೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಪ್ರಶ್ನಿಸಿದೆ.
ತಂದೆಯನ್ನು ಕಳೆದುಕೊಂಡು ನೋವಿನಲ್ಲಿದ್ದ ಆ ಮಕ್ಕಳಿಗೆ ಮೃತದೇಹ ಸಾಗಿಸಲು ಕನಿಷ್ಠ ಆಂಬುಲೆನ್ಸ್ ಒದಗಿಸದಿರುವುದು ಅಮಾನವೀಯ ಮತ್ತು ರಾಜ್ಯದ ಜನರು ತಲೆ ತಗ್ಗಿಸುವಂತದ್ದು ಎಂದು ಹೇಳಿದೆ.
ಆಂಬುಲೆನ್ಸ್ ಸಿಗದೆ ತಂದೆಯ ಮೃತದೇಹವನ್ನು ಮಕ್ಕಳು ಬೈಕ್‌ನಲ್ಲಿ ಕೊಂಡೊಯ್ದ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆಯಲ್ಲಿ ನಡೆದಿದೆ ಎಂದು ಹೇಳಿದೆ.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತೂ ಮಾನವೀಯತೆ ಇಲ್ಲವಾಗಿರುವುದಕ್ಕೆ ಈ ಮನಕಲಕುವ ಘಟನೆಯೇ ಸಾಕ್ಷಿ. ಪಾವಗಡ ಕಾಂಗ್ರೆಸ್ ಶಾಸಕ ಎಚ್.ವಿ.ವೆಂಕಟೇಶ್ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿ, ದ್ವೇಷ ರಾಜಕಾರಣ ಮಾಡುತ್ತಿರುವುದಕ್ಕೆ ಜನರು ಪರಿತಪಿಸುವಂತಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.