

ಬೆಂಗಳೂರು: ನಂದಿ ಇನ್ಪಾ›ಸ್ಟ್ರಕ್ಚರ್ ಎಂಟರ್ಪ್ರೖೆಸಸ್ (ನೈಸ್) ರಸ್ತೆಗೆ ನೀಡಲಾದ ಹೆಚ್ಚುವರಿ 543 ಎಕರೆ ಜಮೀನು ವಾಪಸ್ ಪಡೆಯುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಸೋಮ ವಾರ ನಡೆದ ಸಭೆಯಲ್ಲಿ ನೈಸ್ ಯೋಜನೆ ಬಗ್ಗೆ ಗಂಭೀರ ಚರ್ಚೆಯಾಯಿತು.
ಜನತಾದಳ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಾಡಿಕೊಂಡ ಒಪ್ಪಂದಗಳು ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಿವೆ. ಒಪ್ಪಂದದಂತೆ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸು ವಲ್ಲಿ ಸಂಸ್ಥೆಯು ವಿಫಲವಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ಬಳಕೆ ರಸ್ತೆಗಳನ್ನು ಸಿಮೆಂಟ್-ಕಾಂಕ್ರೀಟ್ನಿಂದ ನಿರ್ವಿುಸಿಲ್ಲ. ಅಡ್ಡ ರಸ್ತೆಗಳು, ಸೇತುವೆಗಳ ವಿನ್ಯಾಸ ಮತ್ತು ವಿಸ್ತೀರ್ಣದಲ್ಲಿ ಬಹಳಷ್ಟು ಉಲ್ಲಂಘನೆಗಳಾಗಿವೆ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಒಪ್ಪಂದದಂತೆ 100 ಕೋಟಿ ರೂ. ಪಾವತಿಸಲು ಸಂಸ್ಥೆ ಕೇಳಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ.
ತಲೆನೋವು ನಿವಾರಣೆ: ನೈಸ್ ಯೋಜನೆ ಸಮಸ್ಯೆಗಳು ಕ್ಲಿಷ್ಟಕರವಾಗಿವೆ. ಆಡಳಿತ, ಕಾನೂನು ಮತ್ತು ತಾಂತ್ರಿಕ ತೊಡಕು ಪತ್ತೆ ಹಚ್ಚಿ ಶಾಶ್ವತ ಪರಿಹಾರ ಕಂಡುಕೊಂಡು ಸರ್ಕಾರದ ತಲೆನೋವು ನಿವಾರಿಸಬೇಕು ಎಂಬ ನಿಲುವಿಗೆ ಸಭೆ ಒತ್ತಾಸೆ ನೀಡಿದೆ. ಟೌನ್ಶಿಪ್ ನಿರ್ವಣಕ್ಕೆ ಸಂಸ್ಥೆಯು 1,600 ಎಕರೆ ಜಮೀನು ವಶಪಡಿಸಿ ಕೊಂಡಿದೆ. ಪ್ರತಿ ಎಕರೆಗೆ 1.60 ಕೋಟಿ ರೂ. ಪರಿಹಾರದ ಜತೆಗೆ ಭೂಸಂತ್ರಸ್ತರಿಗೆ 60-40 ಅಡಿ ವಿಸ್ತೀರ್ಣದ ನಿವೇಶನವನ್ನು ಕೊಡಿಸಬೇಕು ಎಂಬ ಒತ್ತಾಯ ಸಭೆಯಲ್ಲಿ ವ್ಯಕ್ತವಾಗಿದೆ.
ಟೌನ್ಶಿಪ್ಗಾಗಿ ಜಮೀನು ಸ್ವಾಧೀನಕ್ಕೆ ಪಡೆದು 20 ವರ್ಷಗಳು ಕಳೆದಿದ್ದು, ರೈತರಿಗೆ ಬಹುದೊಡ್ಡ ಅನ್ಯಾಯವಾಗಿದೆ. ಈ ಹಿಂದೆ ನಿಗದಿಯಾದ ಎಕರೆಗೆ 40 ಲಕ್ಷ ರೂ. ಪರಿಹಾರದ ಮೊತ್ತವನ್ನು ರೈತರು ಒಪ್ಪಿಲ್ಲ. ಎಕರೆಗೆ 1.60 ಕೋಟಿ ರೂ. ಜತೆಗೆ ನಿವೇಶನ ನೀಡಲು ಸಂಸ್ಥೆ ಒಪ್ಪದಿದ್ದರೆ 1,600 ಎಕರೆ ಜಮೀನು ವಾಪಸ್ ಪಡೆಯುವುದು ಸೂಕ್ತವೆಂಬ ಸಲಹೆ ನೀಡಲಾಗಿದೆ.
ನೈಸ್ ಯೋಜನೆಯು ಜನತಾದಳ-ಕಾಂಗ್ರೆಸ್ ಸರ್ಕಾರಗಳ ಪಾಪದ ಕೂಸು. ಒಪ್ಪಂದಗಳಿಗೆ ಆಗ ನೀಡಿದ ಅನುಮೋದನೆ ಹೊರೆಯಾಗಿ ಪರಿಣಮಿಸಿದ್ದು, ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ಬಿಕ್ಕಟ್ಟು ಶೀಘ್ರ ಬಗೆಹರಿಸಲಾಗುವುದು. | ಆರ್.ಅಶೋಕ್ ಕಂದಾಯ ಸಚಿವ
ಮತ್ತೊಂದು ವರದಿ: ಸಭೆಯ ನಂತರ ಸುದ್ದಿಗಾರ ರೊಂದಿಗೆ ಸಿ.ಸಿ.ಪಾಟೀಲ್ ಮಾತನಾಡಿ, ನೈಸ್ಗೆ ನೀಡಿದ ಹೆಚ್ಚುವರಿ 543 ಎಕರೆ ಜಮೀನು ವಾಪಸ್ ಪಡೆಯುವುದಕ್ಕೆ ಸಭೆ ಒಪ್ಪಿಗೆ ನೀಡಿದೆ. ಹೆಚ್ಚುವರಿ ಜಮೀನು ವಾಪಸ್ ಪ್ರಕ್ರಿಯೆ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಂದ 15 ದಿನಗಳೊಳಗೆ ಮತ್ತೊಂದು ವರದಿ ತರಿಸಿಕೊಳ್ಳಲಾಗುವುದು. ಈ ವರದಿ ಬಂದ ನಂತರ ಇನ್ನೊಮ್ಮೆ ಸಭೆ ಸೇರಿ ಅಂತಿಮ ತೀರ್ವನಕ್ಕೆ ಬರಲಾಗುವುದು ಎಂದರು. ಹೆಚ್ಚುವರಿ ಜಮೀನು ಜತೆಗೆ ಯೋಜನೆ ಅನುಷ್ಠಾನ, ಕಾಮಗಾರಿಗಳು ಇನ್ನಿತರ ವಿಚಾರಗಳು ಸಭೆಯಲ್ಲಿ ವಿಸõತವಾಗಿ ಚರ್ಚೆಯಾಗಿವೆ ಎಂದರು.
ಸಿದ್ದುಗೆ ಟಾಂಗ್: ಲೋಕೋಪಯೋಗಿ ಇಲಾಖೆಯ 900 ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಮೂಲಕ ಅಚ್ಚುಕಟ್ಟಾಗಿ ಪರೀಕ್ಷೆ ನಡೆದಿದೆ. ಸೇಂಟ್ ಜಾನ್ಸ್ ಪರೀಕ್ಷಾ ಕೇಂದ್ರದಲ್ಲಿ ಅಕ್ರಮವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಎಫ್ಐಆರ್ ದಾಖಲಾಗಿದೆ. ಈ ಪ್ರಕರಣಕ್ಕೂ ಇಲಾಖೆ ನೇಮಕ ಪ್ರಕ್ರಿಯೆಗೂ ಸಂಬಂಧವಿಲ್ಲ ಎಂದು ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ನಮ್ಮನ್ನು ಹೊಗಳುತ್ತಾರೆ ಎಂದು ಭಾವಿಸುವ ಹುಚ್ಚ ನಾನಲ್ಲ. ಅವರ ಆಡಳಿತಾವಧಿಯಲ್ಲಿ ವಿಧಾನಸೌಧದ 3ನೇ ಮಹಡಿ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿತ್ತು ಎಂಬ ದೂರುಗಳನ್ನು ಮರೆತಂತಿದೆ ಎಂದು ಛೇಡಿಸಿದರು.