ಶೀಘ್ರವೇ ಬರಲಿದೆ ನೂರು ರೂಪಾಯಿ ನಾಣ್ಯ; ಯಾವಾಗ, ಹೇಗಿರಲಿದೆ?

PM Modi
Published on

ನವದೆಹಲಿ: ಕೇಂದ್ರ ಸರ್ಕಾರವೂ ಶೀಘ್ರದಲ್ಲೇ ನೂರು ರೂಪಾಯಿ ನಾಣ್ಯವನ್ನು ಹೊರ ತರಲಿದೆ ಎಂಬ ಸಂಗತಿಯೊಂದು ಹೊರಬಿದ್ದಿದೆ. ಮನ್​ ಕಿ ಬಾತ್​ನ ನೂರನೇ ಕಾರ್ಯಕ್ರಮದ ಸ್ಮರಣಾರ್ಥವಾಗಿ ಈ ನೂರು ರೂಪಾಯಿ ನಾಣ್ಯ ಬಿಡುಗಡೆ ಆಗಲಿದೆ ಎನ್ನಲಾಗಿದೆ.

ಮನ್ ಕಿ ಬಾತ್ ನೂರನೇ ಸಂಚಿಕೆಯ ಸಂಸ್ಮರಣಾರ್ಥವಾಗಿ ಈ ನೂರು ರೂಪಾಯಿ ನಾಣ್ಯವನ್ನು ಕೇಂದ್ರ ಸರ್ಕಾರ ಮುದ್ರಿಸಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಇದೇ ಏ.30ರಂದು ಮನ್​ ಕಿ ಬಾತ್​ನ ನೂರನೇ ಸಂಚಿಕೆ ಇದ್ದು ಅಂದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ನಾಣ್ಯ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ನಾಣ್ಯಗಳ ಪೈಕಿ ಸದ್ಯ 20 ರೂ. ಗರಿಷ್ಠ ಮುಖಬೆಲೆ. ನೂರು ರೂಪಾಯಿಯ ಈ ನಾಣ್ಯ ಕಾನೂನುಬದ್ಧ ಕರೆನ್ಸಿ ಆಗಿದ್ದು, ನೂರು ರೂ. ಮೌಲ್ಯವನ್ನು ಹೊಂದಿದ್ದರೂ ವ್ಯಾಪಕ ಬಳಕೆಗೆ ಲಭ್ಯವಿರುವುದಿಲ್ಲ. ಅದಾಗ್ಯೂ ಕೆಲವೊಂದು ನಿಗದಿತ ಸಂಸ್ಥೆಗಳಲ್ಲಿ ಈ ನಾಣ್ಯ ಲಭ್ಯವಿರುತ್ತದೆ.

ಹೇಗಿರಲಿದೆ?: ನೂರರ ಈ ನಾಣ್ಯವು ದುಂಡಗಿದ್ದು, 44 ಮಿ.ಮೀ. ವ್ಯಾಸವಿದ್ದು, 200 ದಂತುರಗಳು ಇರಲಿವೆ. ಮಿಶ್ರಲೋಹದ ಈ ನಾಣ್ಯ 35 ಗ್ರಾಮ ತೂಕ ಇರಲಿದ್ದು, ಶೇ. 50 ಬೆಳ್ಳಿ, ಶೇ. 40 ತಾಮ್ರ, ಶೇ. 5 ನಿಕ್ಕೆಲ್ ಮತ್ತು ಶೇ. 5 ಜಿಂಕ್​ ಒಳಗೊಂಡಿರುತ್ತದೆ. ಅಶೋಕಸ್ತಂಭ ಹಾಗೂ ಸತ್ಯಮೇವ ಜಯತೇ ಬರಹವನ್ನೂ ಈ ನಾಣ್ಯ ಹೊಂದಿರುತ್ತದೆ. ಜೊತೆಗೆ ದೇವನಾಗರಿ ಲಿಪಿಯಲ್ಲಿ ಭಾರತ ಮತ್ತು ಇಂಗ್ಲಿಷ್​ನಲ್ಲಿ ಇಂಡಿಯಾ ಎಂದೂ ಬರೆಯಲಾಗಿರುತ್ತದೆ. ಅಲ್ಲದೆ ಮನ್ ಕಿ ಬಾತ್ ಕುರಿತ ಬರಹವೂ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net