

ಬೆಂಗಳೂರು: ಕರೊನಾದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ, ತಕ್ಷಣದ ಅವಶ್ಯಕತೆಗಳಿಗೆ ಆರ್ಬಿಐನಿಂದ 2000 ಕೋಟಿ ರೂ. ಸಾಲಕ್ಕೆ ಮುಂದಾಗಿದೆ.
ಕೇಂದ್ರ ಸರ್ಕಾರ ವಿತ್ತೀಯ ಹೊಣೆ ಗಾರಿಕೆ ಹಾಗೂ ಆಯವ್ಯಯ ನಿರ್ವಹಣೆ ಕಾಯ್ದೆಗೆ ತಿದ್ದುಪಡಿ ತಂದಿದೆ. ಜಿಡಿಪಿಯ ಶೇ. 3ರಷ್ಟು ಮಾಡಬಹುದಾದ ಸಾಲದ ಪ್ರಮಾಣವನ್ನು ಶೇ. 5ಕ್ಕೆ ಏರಿಸಿದೆ. ಹೆಚ್ಚುವರಿಯಾಗಿ ಸುಮಾರು 15 ಸಾವಿರ ಕೋಟಿ ರೂ. ಸಾಲ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಸರ್ಕಾರ ತಕ್ಷಣಕ್ಕೆ 2000 ಕೋಟಿ ರೂ. ಸಾಲಕ್ಕೆ ಮುಂದಾಗಿದೆ. ಸೆಕ್ಯುರಿಟಿ ಬಾಂಡ್ಸ್ ಹರಾಜು ಮೂಲಕ ಸಾಲಕ್ಕೆ ಸರ್ಕಾರ ಮುಂದಾಗಿದೆ. ಜೂ. 8 ಅಥವಾ 9ರಂದು ಶೇ. 6.48 ಬಡ್ಡಿದರದಲ್ಲಿ ಹರಾಜಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ ಥರ್ಮಲ್ ಸ್ಕ್ರೀನಿಂಗ್ ಉಪಕರಣ ಹೆಚ್ಚು ನೀಡಿ
ಸೆಕ್ಯುರಿಟಿ ಬಾಂಡ್ ಹರಾಜು ಹಾಕಿ ಪ್ರತಿವರ್ಷ ಸರ್ಕಾರ ಸಾಲ ಪಡೆಯುತ್ತಿರುತ್ತದೆ. ಆದರೆ ಕರೊನಾ ಹಾಗೂ ಕರೊನಾ ಮುಂಚಿನ ಆರ್ಥಿಕ ಕುಸಿತದ ಪರಿಣಾಮ ಆರ್ಥಿಕ ವರ್ಷ ಪ್ರಾರಂಭವಾದ ಒಂದೇ ತಿಂಗಳಿನಲ್ಲಿ ಸರ್ಕಾರ ಸಾಲಕ್ಕೆ ಮುಂದಾಗಿರುವುದು ಇದೇ ಮೊದಲು ಎಂದು ಆರ್ಥಿಕ ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ. ಬೇರೆ ರಾಜ್ಯಗಳು ಕಳೆದ ತಿಂಗಳೇ ಸಾಲ ಪಡೆದಿವೆ.
ಒಡಿಗೂ ಒಪ್ಪಿಗೆ: ಆರ್ಬಿಐ 25 ಸಾವಿರ ಕೋಟಿ ರೂ. ತನಕ ಓವರ್ ಡ್ರಾಪ್ಟ್ ಸಹ ಪಡೆಯಲು ಒಪ್ಪಿಗೆ ನೀಡಿತ್ತು. ಆದರೆ ಕೇಂದ್ರ ಸರ್ಕಾರ ಎಫ್ಆರ್ಬಿಎಂ ಕಾಯ್ದೆಗೆ ತಿದ್ದುಪಡಿ ತಂದ ಪರಿಣಾಮ ಹೆಚ್ಚುವರಿ ಸಾಲಕ್ಕೆ ಅವಕಾಶ ಸಿಕ್ಕಿದ್ದರಿಂದ ಒಡಿ ಪಡೆಯುವ ಅಗತ್ಯಬಿದ್ದಿಲ್ಲ ಎಂದು ಮೂಲಗಳು ಹೇಳುತ್ತವೆ. ರಾಜ್ಯ ಸರ್ಕಾರ ಈ ಸಾಲಿನ ಬಜೆಟ್ನಲ್ಲಿ 53214.13 ಕೋಟಿ ರೂ. ಸಾಲ ಮಾಡುವ ಅಂದಾಜು ಮಾಡಿತ್ತು. ಆದರೆ ಈಗ ಹೆಚ್ಚುವರಿಯಾಗಿ 15 ಸಾವಿರ ಕೋಟಿ ರೂ. ಸಾಲಕ್ಕೆ ಅವಕಾಶ ಲಭಿಸಿದೆ. ಹಂತಹಂತವಾಗಿ ಸಾಲ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
ಕಾಯ್ದೆ ತಿದ್ದುಪಡಿ: ಹೆಚ್ಚುವರಿ ಸಾಲ ಮಾಡುವುದಕ್ಕೆ ರಾಜ್ಯ ಸರ್ಕಾರ ಸಹ ವಿತ್ತೀಯ ಹೊಣೆಗಾರಿಕೆ ಕಾಯ್ದೆಗೆ ಸಣ್ಣ ತಿದ್ದುಪಡಿ ಮಾಡಿಕೊಳ್ಳಬೇಕಿದೆ. ಸದ್ಯಕ್ಕೆ ಅಧಿವೇಶನ ಇಲ್ಲದ್ದರಿಂದ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.
6 ತಿಂಗಳ ತನಕ ಪರಿಣಾಮ
ಉದ್ದಿಮೆ ಶೇ.40 ಚೇತರಿಸಿಕೊಂಡಿದ್ದರೂ ಸ್ವಂತ ತೆರಿಗೆಗಳ ಸಂಗ್ರಹ ಸಹಜ ಸ್ಥಿತಿಗೆ ಮರಳಲು 6 ತಿಂಗಳು ಬೇಕಾಗಬಹುದು ಎಂದು ಆರ್ಥಿಕ ಇಲಾಖೆ ಅಂದಾಜಿಸಿದೆ. ನಿಗಮ-ಮಂಡಳಿಗಳ ಮೂಲಕ ಮುಕ್ತ ಮಾರುಕಟ್ಟೆಗಳಲ್ಲೂ ಸಾಲ ಪಡೆಯಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.