

ಬೆಂಗಳೂರು: ಕರೊನಾ ಲಾಕ್ಡೌನ್ ಸಂದರ್ಭವನ್ನೇ ದುರ್ಬಳಕೆ ಮಾಡಿಕೊಂಡಿರುವ ಕಾಳಸಂತೆಕೋರರು, ಅಕ್ರಮ ಮಾರ್ಗಗಳಲ್ಲಿ ಮದ್ಯ ಮಾರಾಟ ಮಾಡಿ ಲಾಭ ಮಾಡುವುದನ್ನೆ ದಂಧೆ ಆಗಿಸಿಕೊಂಡಿದ್ದಾರೆ. ಮೂರ್ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಮದ್ಯ ಮಾರುತ್ತಿರುವುದು ಕಾಳಸಂತೆಕೋರರಿಗೆ ಅಷ್ಟೇ ಅಲ್ಲ, ಅಬಕಾರಿ ಅಧಿಕಾರಿಗಳು ಮತ್ತು ಪೊಲೀಸರಿಗೂ ಲಾಭದಾಯಕ ಆಗಿದೆ. ಮತ್ತೊಂದೆಡೆ ಸರ್ಕಾರಕ್ಕೆ ಬರಬೇಕಾಗಿರುವ ಆದಾಯ ದಂಧೆಕೋರರ ಪಾಲಾಗುತ್ತಿದೆ.
ನಿತ್ಯವೂ 60 ಕೋಟಿ ರೂ. ನಷ್ಟ: ರಾಜ್ಯ ಸರ್ಕಾರದ ಖಜಾನೆ ತುಂಬಿಸುವುದರಲ್ಲಿ ಅಬಕಾರಿ ಇಲಾಖೆಯದ್ದು ಮಹತ್ವದ ಪಾತ್ರ. ಪ್ರತಿ ದಿನ ಸರಾಸರಿ 60 ಕೋಟಿ ರೂ. ಆದಾಯ ಮದ್ಯ ವಹಿವಾಟಿನಿಂದಲೇ ಸರ್ಕಾರಕ್ಕೆ ಬರುತಿತ್ತು. ಲಾಕ್ಡೌನ್ ಆದ ಬಳಿಕ 1 ತಿಂಗಳಲ್ಲಿ ಸರ್ಕಾರದ ಖಜಾನೆಗೆ 1900 ಕೋಟಿ ರೂ. ನಷ್ಟವಾಗಿದೆ. ಮೇ 3ರ ಹೊತ್ತಿಗೆ ಆಗುವ ನಷ್ಟ 3 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಕಳ್ಳಬಟ್ಟಿ ದಂಧೆ: ಮದ್ಯ ಮಾರಾಟದಲ್ಲಿ ಸೆಕೆಂಡ್ಸ್, ಥರ್ಡ್ಸ್ ವಹಿವಾಟು ತಡೆಗಟ್ಟುವಲ್ಲಿ ಅಬಕಾರಿ ಇಲಾಖೆ ಬಹುತೇಕ ಯಶಸ್ವಿಯಾಗಿತ್ತು. ಸರ್ಕಾರದ ಖಜಾನೆಗೆ ಬರದೆ ಸೋರಿ ಹೋಗುತ್ತಿದ್ದ ವಾಮಮಾರ್ಗಗಳನ್ನು ಬಂದ್ ಮಾಡಿತ್ತು. ಕಳ್ಳಬಟ್ಟಿ, ಬೈನೆ ಸಾರಾಯಿ ಮತ್ತು ತೆಂಗಿನ ಮರದ ನೀರಾ ಸೇರಿ ಎಲ್ಲದಕ್ಕೂ ಇಲಾಖೆ ತಡೆದಿತ್ತು. ಈಗ ಆ ಎಲ್ಲ ಅಕ್ರಮ ದಂಧೆಗಳು ತಲೆ ಎತ್ತಿವೆ.
ಮೂರ್ನಾಲ್ಕು ಪಟ್ಟು ಹೆಚ್ಚಳ: ಮೊದಲ ಲಾಕ್ಡೌನ್ ಘೋಷಣೆಯಾದ ಬಳಿಕ ಮದ್ಯ ಸಿಗದೆ ಕೆಲ ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡರು. ದಂಧೆಕೋರರು ಪ್ರಾರಂಭದಲ್ಲಿ ದುಪ್ಪಟ್ಟು ಬೆಲೆಗೆ ಮಾರಿ, ಬೇಡಿಕೆ ಹೆಚ್ಚಾದಂತೆ ಬೆಲೆ ಹೆಚ್ಚಿಸುತ್ತಲೇ ಹೋದರು. ಏ.14ರ ಬಳಿಕ ಕಾಳಸಂತೆಯಲ್ಲಿ
ಮದ್ಯದ ಬೆಲೆ ದಿಢೀರ್ ಹೆಚ್ಚಾಯಿತು. ನಿರ್ಬಂಧ ತೆರವಾದ ಬಳಿಕ ತೆರೆಯುವ ಮದ್ಯದಂಗಡಿಯ ಸ್ಟಾಕ್ನಲ್ಲಿ ವ್ಯತ್ಯಾಸವಾಗಿದ್ದರೆ ಲೈಸೆನ್ಸ್ ರದ್ದು ಮಾಡುವ ಅಧಿಕಾರ ಅಬಕಾರಿ ಇಲಾಖೆಗಿದೆ. ಆ ಜವಾಬ್ದಾರಿ ಇಲಾಖೆ ಅಧಿಕಾರಿಗಳೇ ನಿಭಾಯಿಸಬೇಕಾದ್ದರಿಂದ ಕುರಿ ಕಾಯಲು ತೋಳ ನೇಮಿಸಿದಂತಾಗಿದೆ.
ಹಿಂಬಾಗಿಲಿನ ವ್ಯವಹಾರ: ಸದ್ಯ ಮದ್ಯ ನಿಷೇಧ ಇದ್ದರೂ ಹಿಂಬಾಗಿಲಿನ ವಹಿವಾಟಿಗೇನೂ ಕೊರತೆಯಾಗಿಲ್ಲ. ಎಲ್ಲೆಲ್ಲೋ ಸ್ಟಾಕ್ ಇಟ್ಟಿರುವ ಮಾರಾಟಗಾರರು ವಾಮಮಾರ್ಗದಲ್ಲಿ ಮಾರುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ಈ ದಂಧೆ ನಡೆಯುತ್ತಿದ್ದು, ನೆಪ ಮಾತ್ರಕ್ಕೆ ಕೆಲ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗಿದೆ.
ನಿಷೇಧಾಜ್ಞೆ 3ನೇ ಬಾರಿ ವಿಸ್ತರಣೆ: ಕರೊನಾ ತಡೆಯುವ ಸಲುವಾಗಿ ಮದ್ಯ ಮಾರಾಟಕ್ಕೆ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಮೇ 3ರ ತನಕ ವಿಸ್ತರಿಸಲು ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಹೊಸ ಆದೇಶ ಹೊರಡಿಸಿದೆ. ಮೊದಲ ಹಂತದಲ್ಲಿ ಮಾ.23ರಿಂದ ಏ.14ರ ತನಕ ಮಾತ್ರ ಮದ್ಯ ಮಾರಾಟಕ್ಕೆ ನಿಷೇಧಾಜ್ಞೆ ವಿಧಿಸಲಾಗಿತ್ತು. ಬಳಿಕ ಏ.20ರ ತನಕ ವಿಸ್ತರಿಸಲಾಗಿತ್ತು. ಮದ್ಯ ಮಾರಾಟ ಬೇಕೋ ಬೇಡವೋ ಎನ್ನುವ ಚರ್ಚೆ ನಡೆಯುತ್ತಿದ್ದರಿಂದ ಏ.20ರ ಬಳಿಕ ಮದ್ಯದಂಗಡಿ ತೆರೆಯಲು ಈ ಮೊದಲು ನಿರ್ಧರಿಸಲಾಗಿತ್ತು. ಜನಾಭಿಪ್ರಾಯದ ಹಿನ್ನೆಲೆಯಲ್ಲಿ ಈ ಉದ್ದೇಶ ಕೈ ಬಿಡಲಾಗಿದೆ. ರಾಜಕಾರಣಿಗಳ ತೀವ್ರ ಒತ್ತಡ
ರಾಜ್ಯದಲ್ಲಿ ಮದ್ಯದಂಗಡಿ ಒಡೆತನ ಹೊಂದಿದವರಲ್ಲಿ ಹಲವರಿಗೆ ಪ್ರಭಾವಿ ರಾಜಕಾರಣಿಗಳ ಸಂಪರ್ಕವಿದೆ. ಹಾಸನದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಡೆಯ ಮದ್ಯದಂಗಡಿ ಎಂದು ಶಾಸಕರೇ ವಕಾಲತ್ತು ವಹಿಸಿ ಕಿತ್ತಾಡಿ ಬೀದಿರಂಪ ಮಾಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಬಟಾಬಯಲಾಗಿತ್ತು. ಇಂಥ ಹಲವು ಉದಾಹರಣೆಗಳಿವೆ. ಲಾಕ್ಡೌನ್ ಅವಧಿಯಲ್ಲಿ ಮದ್ಯದಂಗಡಿಗಳ ಕಳವು ಪ್ರಕರಣದಲ್ಲಿ ಕೆಲವು ಸಂಬಂಧಿಸಿದವರ ಕುಮ್ಮಕ್ಕಿನಿಂದಲೇ ನಡೆದಿದೆ. ಲಾಕ್ಡೌನ್ ಮುಗಿದ ಮೇಲೆ ಸುಳ್ಳು ಲೆಕ್ಕ ನೀಡಿ ಎಲ್ಲ ಸರಿಪಡಿಸಿಕೊಳ್ಳಬಹುದು ಎನ್ನುವುದು ದಂಧೆಕೋರರ ಲೆಕ್ಕಾಚಾರ.
| ಶಿವಾನಂದ ತಗಡೂರು
ಕುಡುಕರಲ್ಲ, ದುಪ್ಪಟ್ಟು ಹಣದಾಸೆಗೆ ಮದ್ಯದಂಗಡಿ ಮಾಲೀಕರೇ ಕಳ್ಳತನ ಮಾಡುತ್ತಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಬಂದಿದ್ದು ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. | ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವ
ಮೊದಲು ಜನರ ಜೀವ ಮುಖ್ಯ, ಆಮೇಲೆ ಮದ್ಯದಂಗಡಿ ವಿಚಾರ. ಜನರ ಜೀವದ ಜತೆ ಚೆಲ್ಲಾಟವಾಡಲು ಸರ್ಕಾರ ಸಿದ್ಧವಿಲ್ಲ. ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನಗಳನ್ನು ಸರ್ಕಾರ ಪಾಲಿಸಲಿದೆ. ಮೇ 3ರ ಬಳಿಕ ಮದ್ಯ ಮಾರಾಟದ ಬಗ್ಗೆ ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ. | ನಾಗೇಶ್ ಅಬಕಾರಿ ಸಚಿವ