ದಸರಾ ಆಹ್ವಾನ ಸರ್ಕಾರ ಮರುಪರಿಶೀಲಿಸಲಿ

dasara
ಮೈಸೂರಿನಲ್ಲಿ ನಡೆಯುವ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡದಂತೆ ಒತ್ತಾಯಿಸಿ ಹಿಂದು ರಾಷ್ಟ್ರ ಸಮನ್ವಯ ಸಮಿತಿಯ ರಮೇಶ್ ಬಾಬು ಜಾಧವ್, ದಿನೇಶ್ ಚೌಹಾಣ್, ಪರಿಸರ ರಮೇಶ್, ಮಹೇಶ್, ವಾಗೀಶ್ ಮತ್ತಿತರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿ ಹಿಂದು ರಾಷ್ಟ್ರ ಸಮನ್ವಯ ಸಮಿತಿ ಪ್ರಮುಖರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮೈಸೂರು ದಸರಾ ಕೇವಲ ಸಾಂಸ್ಕೃತಿಕ ಹಬ್ಬವಲ್ಲ. ಧಾರ್ಮಿಕ ಆಚರಣೆಯಾಗಿದೆ. ನವರಾತ್ರಿ ಸಂದರ್ಭದಲ್ಲಿ ಕಾಳಿ, ಮಹಾಲಕ್ಷ್ಮೀ, ಸರಸ್ವತಿ ದೇವಿ ಆರಾಧನೆ ನಡೆಯುತ್ತದೆ. ಬಳಿಕ ವಿಜಯದಶಮಿ ಆಚರಣೆಯಿದೆ. ಹಿಂದುಗಳ ಪಾಲಿಗೆ ಪವಿತ್ರ ಹಬ್ಬವಾಗಿದೆ. ಇದರ ಉದ್ಘಾಟನೆಗೆ ಬರುವವರು ಮೂರ್ತಿ ಪೂಜೆ ಮೇಲೆ ಭಕ್ತಿ ಹಾಗೂ ನಾಡದೇವಿ ಮೇಲೆ ಗೌರವ ಹೊಂದಿರಬೇಕು ಎಂದರು.

ಬಾನು ಮುಷ್ತಾಕ್ ಅವರ ಹಿಂದಿನ ಭಾಷಣದಲ್ಲಿ ನಾಡದೇವಿ ಭುವನೇಶ್ವರಿ ನಂಬುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದತ್ತಪೀಠದ ವಿಷಯಕ್ಕೆ ಸಂಬಂಧಿಸಿ ಅವರು ಮುಸ್ಲಿಂ ಸಮುದಾಯದ ಪರ ಮಾತನಾಡಿದ್ದರು. ಆದ್ದರಿಂದ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಸರಿಯಲ್ಲ. ಅವರು ದಸರಾ ಉದ್ಘಾಟನೆ ಮಾಡುವುದು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಬಾನು ಮುಷ್ತಾಕ್ ಬದಲು ನಮ್ಮ ಧಾರ್ಮಿಕ ಆಚರಣೆಯಲ್ಲಿ ನಂಬಿಕೆ ಇರುವ, ಈ ನೆಲದ ಸಂಸ್ಕೃತಿ, ಆಚರಣೆ ಗೌರವಿಸುವ ವ್ಯಕ್ತಿಯನ್ನು ದಸರಾ ಉದ್ಘಾಟನೆಗೆ ಸರ್ಕಾರ ಆಹ್ವಾನಿಸಬೇಕೆಂದು ಒತ್ತಾಯಿಸಿದರು.

ಹಿಂದು ರಾಷ್ಟ್ರ ಸಮನ್ವಯ ಸಮಿತಿ ಪ್ರಮುಖರಾದ ದಿನೇಶ್ ಚೌಹಾಣ್, ಮಹೇಶ್, ಪರಿಸರ ರಮೇಶ್, ರಮೇಶ್ ಬಾಬು ಜಾಧವ್, ವಾಗೀಶ್, ಪ್ರಫುಲ್ಲಚಂದ್ರ, ನಟರಾಜ್, ಜಗನ್ನಾಥ್, ಆನಂದ್, ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net