

| ವಿಲಾಸ ಮೇಲಗಿರಿ ಬೆಂಗಳೂರು
ವಿದ್ಯಾರ್ಥಿಗಳ ಪ್ರವೇಶಾತಿ, ಶಿಕ್ಷಕರ ನೇಮಕಾತಿ... ಹೊರತುಪಡಿಸಿದರೆ ಗ್ರಾಮೀಣ ಪ್ರದೇಶದ ಶಾಲೆಗಳ ಬಹುತೇಕ ಕಾರ್ಯಗಳೆಲ್ಲವೂ ಇನ್ನು ಮುಂದೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ (ಆರ್ಡಿಪಿಆರ್) ಸುಪರ್ದಿಗೆ ಒಳಪಡಲಿದೆ...!
ಶಿಕ್ಷಕರ ಹಾಜರಾತಿ ಪರಿಶೀಲಿಸುವ ಅಧಿಕಾರ, ಅತಿಥಿ ಶಿಕ್ಷಕರ ನೇಮಕ, ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಬಿಡುಗಡೆಯ ಹಕ್ಕನ್ನು ತಾಲೂಕು ಪಂಚಾಯತ್ಗಳಿಗೆ ನೀಡಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟದ ಉಸ್ತುವಾರಿಯೂ ಇದರಲ್ಲಿ ಸೇರಿದೆ. ಪಠ್ಯಪುಸ್ತಕ, ಸಮವಸ್ತ್ರ ವಿತರಣೆಯೂ ಆಯಾ ಎಸ್ಡಿಎಂಸಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಅಧಿಕಾರ ವ್ಯಾಪ್ತಿಗೆ ಒಳಪಡಲಿದೆ. ಜನರ ಕೈಗೆ ಅಧಿಕಾರ ಕೊಡುವ, ಜವಾಬ್ದಾರಿ ಹಂಚಿಕೆ ಮಾಡುವ ನಿಟ್ಟಿನಲ್ಲಿ ಬಜೆಟ್ನಲ್ಲಿ ಘೋಷಿಸಿದಂತೆ ಶಾಲಾ ಶಿಕ್ಷಣ ಇಲಾಖೆಯ 26 ಕಾರ್ಯಕ್ರಮಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ. ಯಾವ ಯಾವ ಕಾರ್ಯಕ್ರಮಗಳನ್ನು ತನ್ನ ವ್ಯಾಪ್ತಿಗೆ ಪಡೆದುಕೊಳ್ಳಬೇಕು ಎಂಬ ಕುರಿತು 26 ಕಾರ್ಯಕ್ರಮಗಳ ಕರಡು ಪಟ್ಟಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿದ್ಧಪಡಿಸಿದೆ.
2023-24ನೇ ಸಾಲಿಗೆ ಶಾಲಾ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳನ್ನು ವರ್ಗಾಯಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತಲೇ ರಾಜ್ಯಾದ್ಯಂತ ಶಿಕ್ಷಕರ ತೀವ್ರ ವಿರೋಧ ವ್ಯಕ್ತವಾಗಿದೆ. ಗ್ರಾಮಮಟ್ಟದಲ್ಲಿ ಶಿಕ್ಷಕರ ಮೇಲೆ ಚುನಾಯಿತ ಜನಪ್ರತಿನಿಧಿಗಳು ಸವಾರಿ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬುದು ಶಿಕ್ಷಕರ ಆಕ್ರೋಶ ಭುಗಿಲೇಳಲು ಕಾರಣವಾಗಿದೆ.
ಹೊಣೆಗಾರಿಕೆ ಹಂಚಿಕೆ ಬಗ್ಗೆ ಚರ್ಚೆ: ಮೂರು ಹಂತದಲ್ಲಿ ಕಾರ್ಯಕ್ರಮಗಳ ನಿರ್ವಹಣೆ, ಜವಾಬ್ದಾರಿ ಹಂಚಿಕೆಗೆ ಕರಡು ಸಿದ್ಧಗೊಂಡಿದೆ. ಜತೆಗೆ ಈಗಾಗಲೇ ಶಾಲಾ ಶಿಕ್ಷಣ ಇಲಾಖೆ ಗ್ರಾಮೀಣಾಭಿವೃದ್ಧಿ ಇಲಾಖೆ ಉನ್ನತಾಧಿಕಾರಿಗಳ ಮಟ್ಟದಲ್ಲಿ ಚರ್ಚೆ ಕೂಡ ನಡೆದಿದೆ.
ವರ್ಗಾವಣೆಯ ಉದ್ದೇಶವೇನು?: ಸಂವಿಧಾನದ 73ನೇ ತಿದ್ದುಪಡಿ ಅನ್ವಯ ಶೆಡ್ಯೂಲ್ 11ರಲ್ಲಿ ಪಂಚಾಯತ್ ರಾಜ್ ಸಂಸ್ಥೆ ಜವಾಬ್ದಾರಿ ಹಂಚಿಕೆ ಮಾಡಲಾಗುತ್ತದೆ. ಅಧಿಕಾರ ವಿಕೇಂದ್ರೀಕರಣ ತತ್ವದಡಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಯಾರು? ಯಾವ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡಬೇಕು ಎಂಬುದನ್ನು ಸ್ಪಷ್ಟಪಡಿಸುವ ಉದ್ದೇಶ ಇದರ ಹಿಂದಿದೆ. ಈ ದೃಷ್ಟಿಯಿಂದ ಜವಾಬ್ದಾರಿ ನಕ್ಷೆಯನ್ನು ಗ್ರಾಮೀಣಾಭಿವೃಧಿ್ಧ ಇಲಾಖೆ ಸಿದ್ಧಪಡಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾಯ್ದೆ ಆಧರಿಸಿಯೇ ಈ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರಿನ್ಸಿಪಲ್ ಆಫ್ ಸಬ್ಸಿಡಿಯಾರಿಟಿ (ಸುಪದ್ರೀಕರಣ) ಅನ್ವಯ ಯಾವ ಕೆಲಸವನ್ನು ಯಾವ ಹಂತದಲ್ಲಿ ಪರಿಣಾಮಕಾರಿ ಮಾಡಬಹುದು ಎಂಬುದನ್ನು ಆಧರಿಸಿ ಆ ಜವಾಬ್ದಾರಿಯನ್ನು ನೀಡುವುದು ಇದರ ಸ್ಪಷ್ಟ ಉದ್ದೇಶವಾಗಿದೆ. ಈ ಪ್ರಕ್ರಿಯೆ ತುಂಬ ದಿನಗಳಿಂದ ಬಾಕಿ ಇತ್ತು. ಈಗ ಚಾಲನೆ ಸಿಕ್ಕಿರುವುದು ಅಧಿಕಾರ ವಿಕೇಂದ್ರೀಕಣಕ್ಕೆ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ತಜ್ಞರು ಹೇಳುತ್ತಾರೆ.
ಅನುಕೂಲಗಳೇನು..?: ಶಾಲೆಗಳಿಗೆ ಈಗಾಗಲೇ ಕಾಂಪೌಂಡ್ ನಿರ್ವಣ, ಕುಡಿಯುವ ನೀರು ಪೂರೈಕೆ ಮತ್ತಿತರ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯಿತಿಗಳು ನಿರ್ವಹಿಸುತ್ತಿವೆ. ಹೀಗೆ ಸರ್ಕಾರದ ಹಲವು ಯೋಜನೆಗಳು, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲಿವೆ.
ಕೇರಳದಲ್ಲಿ ಅನುಷ್ಠಾನ: ಶಾಲೆ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಕಾರ್ಯಕ್ರಮಗಳನ್ನು ಕೇರಳ ಸರ್ಕಾರ ಸ್ಥಳೀಯ ಆಡಳಿತಗಳಿಗೆ ಹಂಚಿಕೆ ಮಾಡಿದೆ. ಅಧಿಕಾರ ವಿಕೇಂದ್ರೀಕರಣ ಅಲ್ಲಿ ಅತ್ಯಂತ ಯಶಸ್ವಿಯಾಗಿ ಜಾರಿಯಾಗುತ್ತಿದೆ. ಅದೇ ಮಾದರಿಯನ್ನು ಇಲ್ಲೂ ಅಳವಡಿಸಲಾಗುತ್ತದೆ. ಶಾಲಾ ಶಿಕ್ಷಣವೊಂದೇ ಅಲ್ಲ, ಬೇರೆ ಬೇರೆ ಇಲಾಖೆಗಳ ಹೊಣೆಗಾರಿಕೆಯ ಹಂಚಿಕೆ ಕೂಡ ನಡೆಯಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಶಾಲಾ ಶಿಕ್ಷಣ ಇಲಾಖೆ ಕೆಲವು ಕಾಯಕ್ರಮಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸುವುದು ಅವೈಜ್ಞಾನಿಕ. ಇದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಾಗುವುದಿಲ್ಲ. ಶಿಕ್ಷಣ ಇಲಾಖೆಯ ದೀರ್ಘಕಾಲದ ವ್ಯವಸ್ಥೆ ಹಾಳು ಮಾಡಲು ಹೊರಟಿರುವುದು ಖಂಡನೀಯ. ಕೂಡಲೇ ಈ ಪ್ರಸ್ತಾವನೆ ಕೈಬಿಡಬೇಕು. | ಮರಿತಿಬ್ಬೇಗೌಡ, ವಿಧಾನ ಪರಿಷತ್ ಸದಸ್ಯ
ಸಾಧಕ- ಬಾಧಕಗಳ ಚರ್ಚೆಯಾಗಲಿ: ಅಧಿಕಾರ ಹಂಚಿಕೆ ಹೆಸರಿನಲ್ಲಿ ಶಿಕ್ಷಕರಿಗೆ ಕಿರುಕುಳವಾಗಬಾರದು. ಈಗಾಗಲೇ ಎಸ್ಡಿಎಂಸಿಗಳಿವೆ. ಸಿಆರ್ಪಿ, ಬಿಆರ್ಪಿ, ಬಿಇಒ, ಡಿಡಿಪಿಐ, ಆಯುಕ್ತರು ಹೀಗೆ ನಾನಾ ಹಂತಗಳಲ್ಲಿ ಅಧಿಕಾರ ನಿರ್ವಹಣೆಯಾಗುತ್ತಿದೆ. ಏಕಾಏಕಿ ಶಾಲಾ ಶಿಕ್ಷಣ ಇಲಾಖೆಯ ಚಟುವಟಿಕೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನೀಡುವುದು ಎಷ್ಟರಮಟ್ಟಿಗೆ ಸರಿ? ಈ ಬಗ್ಗೆ ಶಿಕ್ಷಣ ಸಚಿವರು ಶಿಕ್ಷಕರ ಸಂಘಟನೆಗಳ ಜತೆ ಸಾಧಕ-ಬಾಧಕ ರ್ಚಚಿಸಿ ತೀರ್ಮಾನ ಕೈಗೊಳ್ಳಬೇಕು ಎನ್ನುತ್ತಾರೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ. ನಾಗೇಶ್, ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ.
ಯಾವ ಕೆಲಸ?: ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ಶಿಕ್ಷಕರ ಹಾಜರಾತಿ ಪರಿಶೀಲನೆ ಮಾಡು ವುದು ಹಾಗೂ ಅನಧಿಕೃತ ಗೈರು ಕಂಡುಬಂದಲ್ಲಿ ಮುಖ್ಯ ಶಿಕ್ಷಕರಿಗೆ ಕ್ರಮಕ್ಕೆ ಶಿಫಾರಸು ಮಾಡುವ ಅಧಿಕಾರ ಎಸ್ಡಿಎಂಸಿ ಅಧ್ಯಕ್ಷರಿಗೆ ಸಿಗಲಿದ್ದು, ಎಸ್ಡಿಎಂಸಿಗಳ ಬಲವರ್ಧನೆ ಮಾಡಲಾಗುತ್ತಿದೆ. ಅತಿಥಿ ಶಿಕ್ಷಕರ ನೇಮಕ, ಮಧ್ಯಾಹ್ನದ ಬಿಸಿಯೂಟ ಕಾರ್ಯಕರ್ತರ ನೇಮಕ, ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಬಿಡುಗಡೆ ತಾಪಂ ಜವಾಬ್ದಾರಿಯಾಗಲಿದೆ. ನಿವೇಶನ, ಆಸ್ತಿ ರಕ್ಷಣೆ, ಶಾಲಾ ಕೊಠಡಿ ದುರಸ್ತಿ, ಕುಡಿಯುವ ನೀರು, ಶೌಚಾಲಯ ನಿರ್ವಣ/ದುರಸ್ತಿ, ಅಡುಗೆ ಕೋಣೆ ಮತ್ತು ಸ್ಟೋರ್ ರೂಂ, ಡೈನಿಂಗ್ ಹಾಲ್, ಕಾಂಪೌಂಡ್, ವಿದ್ಯುತ್, ಉದ್ಯಾನ, ಲೈಬ್ರರಿ, ಪ್ರಯೋಗಾಲಯ, ಪೀಠೋಪ ಕರಣಗಳ ಉಸ್ತುವಾರಿ ನೀಡಲಾಗುತ್ತಿದೆ. ಮೈದಾನ, ಆಟದ ಸಾಮಗ್ರಿ, ಸ್ಮಾರ್ಟ್ ಸ್ಕೂಲ್ ಕಿಟ್ಸ್ ಮತ್ತು ಕಲಿಕಾ ಸಾಮಗ್ರಿ, ಹೊಸ ಕೊಠಡಿ ನಿರ್ವಣ, ಸಮವಸ್ತ್ರ, ಶೂ, ಸಾಕ್ಸ್, ದುಸ್ಥಿತಿಯಲ್ಲಿರುವ ಕಟ್ಟಡ ನೆಲಸಮ ಇದರಲ್ಲಿ ಸೇರಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವಿಕೆ, ಶಾಲಾ ಪುಸ್ತಕ ಹಾಗೂ ನೋಟ್ ಪುಸ್ತಕ, ಮಧ್ಯಾಹ್ನದ ಊಟ, ಹಾಲು, ಮೊಟ್ಟೆ, ಬಾಳೆಹಣ್ಣು, ಚಿಕ್ಕಿ, ಅಗತ್ಯ ಸಾಮಗ್ರಿ ಪೂರೈಕೆ, ರ‍್ಯಾಂಪ್ ನಿರ್ವಣ, ತಂಬಾಕು ನಿಷೇಧ, ಆರೋಗ್ಯ ತಪಾಸಣೆ, ಮಕ್ಕಳ ಹಕ್ಕುಗಳ ಜಾಗೃತಿ ಮತ್ತು ಬಾಲಕಿಯರ ಹಕ್ಕುಗಳ ತಿಳಿವಳಿಕೆ, ಸಾಕ್ಷರತಾ ಕೇಂದ್ರಗಳ ನಿಯಂತ್ರಣ ಮತ್ತು ನಿರ್ವಹಣೆಗಳನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ.
ಶಿಕ್ಷಣ ಇಲಾಖೆಯ ಕೆಲ ಕಾರ್ಯಕ್ರಮಗಳನ್ನು ಯಾರಿಗೂ ತೊಂದರೆ ಆಗದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಲಾಗುವುದು. ಶಿಕ್ಷಕರ ಎಲ್ಲ ಸಂಘಟನೆಗಳನ್ನೂ ವಿಶ್ವಾಸಕ್ಕೆ ಪಡೆಯಲಾಗುತ್ತದೆ. | ಮಧು ಬಂಗಾರಪ್ಪ ಶಿಕ್ಷಣ ಸಚಿವ
ಮೂರು ಹಂತದಲ್ಲಿ ಹೊಣೆಗಾರಿಕೆ: ಕಾರ್ಯಕ್ರಮಗಳ ಸ್ವರೂಪ, ಅನುದಾನ ಬಿಡುಗಡೆಯ ಅಧಿಕಾರ, ನಿರ್ವಹಣಾ ಹೊಣೆಗಾರಿಕೆ ಆಧರಿಸಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೂರು ಮೆಟ್ಟಿಲುಗಳಾದ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಜವಾಬ್ದಾರಿಯನ್ನು ನೀಡಲಾಗುತ್ತಿದೆ.